ಒಮ್ಮೆ ಒಂದು ಮಾರುಕಟ್ಟೆ ಸಂಕೀರ್ಣಕ್ಕೆ ಕಾರ್ಯ ನಿಮಿತ್ತ ಪುಟ್ಟ ಮಗನೊಂದಿಗೆ ಹೋಗುತ್ತಿದ್ದೆ. ಆ ಅಂಗಡಿ ಮುಂಗಟ್ಟುಗಳ ಹಿಂಬದಿಯ ಭಾಗದಲ್ಲಿ ನಡೆಯುವಾಗ ನನ್ನ ಮಗ ‘ಅಪ್ಪ… ಅಪ್ಪಾ…. ಅಲ್ನೋಡಿ’ ಎನ್ನುತ್ತಾ ನನ್ನ ಕೈ ಹಿಡಿದು ನಿಲ್ಲಿಸಿದ. ‘ಏನೋ ಕಂದಾ… ಯಾಕೆ, ಏನಾಯ್ತು?’ ಎಂದು ಸ್ವಲ್ಪ ಕುತೂಹಲದಿಂದ ಕೇಳಿದೆ. ‘ಅಲ್ಲಕಣಪ್ಪ, ನಮ್ಮ ಮನೆಯ ದೇವರ ಮಂಟಪದಲ್ಲಿ ಇರೋ ದೇವರ ಫೋಟೊ ಇಲ್ಲಿ ಯಾಕಿಟ್ಟವರೇ?’ ಎಂಬ ಮಗನ ಪ್ರಶ್ನೆಗೆ ಕಿವಿಗೊಟ್ಟು ನೋಡಿದರೆ ಬಹಳ ಬೇಸರದ ದೃಶ್ಯ ಕಣ್ಣಿಗೆ ರಾಚಿತು.
ಮಾರುಕಟ್ಟೆ ಹಿಂಬದಿಯ ಗೋಡೆಯಲ್ಲಿ ಅಲ್ಲಲ್ಲಿ ನಾವು ನಿತ್ಯವೂ ಪೂಜಿಸಿ ಒಳಿತಾಗಲೆಂದು ಪ್ರಾರ್ಥಿಸುವ ಕೆಲವು ಫೋಟೊಗಳನ್ನು ಅಂಟಿಸಲಾಗಿತ್ತು. ನಾಯಿಗಳಂತೆ ವಿವೇಚನೆ ಇಲ್ಲದೆ ಎಲ್ಲೆಂದರಲ್ಲಿ ಸುಸ್ಸು (ಮೂತ್ರ ವಿಸರ್ಜನೆ) ಮಾಡುವ ಕೆಲವರು ಈ ಜಾಗವನ್ನು ಗಬ್ಬೆಬ್ಬಿಸಿರುವುದರಿಂದ ಅದರ ದುರ್ವಾಸನೆ ತಡೆಯಲಾರದೆ ಮಾಲೀಕರು ಈ ದೇವರ ಪಟಗಳನ್ನು ಅಂಟಿಸಿದ್ದರು. ಈ ಫೋಟೊ ನೋಡಿಯಾದರೂ ಅಲ್ಲಿ ಸುಸ್ಸು ಮಾಡಲಾರರು ಎಂಬುದು ಅವರ ನಂಬಿಕೆ. ಈ ಬಗ್ಗೆ ಚಿಕ್ಕವನಾದ ಮಗನಿಗೆ ಹೇಗೆ ಹೇಳಬೇಕೋ ತಿಳಿಯದೆ ಕಸಿವಿಸಿಗೊಂಡೆ. ಇಂತಹ ದೃಶ್ಯಗಳನ್ನು ಅಲ್ಲಲ್ಲಿ ಎಲ್ಲರೂ ನೋಡುತ್ತಿರುತ್ತೇವೆ.
ಎಂಥಾ ಸ್ವಾರ್ಥ ಜನ!, ತಮ್ಮ ಜಾಗದಲ್ಲಿ ಯಾರೂ ಗಲೀಜು ಮಾಡಬಾರದೆಂಬ ಕಾರಣಕ್ಕೆ ದೇವರನ್ನೇ ಗಬ್ಬೆದ್ದು ನಾರುವ ಜಾಗದಲ್ಲಿ ಇಡುತ್ತಾರೆಂದರೆ ದೇವಾಲಯಕ್ಕೆ ಹೋಗಿ ಹೇಗೆ ತಾನೇ ಪೂಜೆ ಸಲ್ಲಿಸಿಯಾರು? ಅದು ಯಾವ ಮನಸ್ಸಿನಲ್ಲಿ ಭಕ್ತಿ ಭಾವವನ್ನು ತಳೆದಾರು. ಅದು ಹೋಗಲಿ, ಆ ಥರದ ಜಾಗದಲ್ಲಿ ದೇವರ ಫೋಟೊ ನೋಡಿಯಾದರೂ ನಮ್ಮ ಜನ ಸುಸ್ಸು ಮಾಡುವುದನ್ನು ಬಿಟ್ಟಾರೆಯೆ? ಏನಿಲ್ಲ. ಕಣ್ಣು ಮುಚ್ಚಿಕೊಂಡು ಜಲಬಾಧೆ ಇಂಗಿಸಿಕೊಂಡು ಕಂಡೂ ಕಾಣದಂತೆ ಹೊರಟು ಬಿಡುತ್ತಾರೆ. ನಾಗರಿಕ ಜಗತ್ತಿನಲ್ಲಿ ಅತ್ಯಂತ ಮುಂದುವರೆದೆವೆಂದು ಬೀಗುವ ಈಗಿನ ಕಾಲಘಟ್ಟದಲ್ಲಿ ಇಂಥ ನೀಚ ಕೃತ್ಯಗಳನ್ನು ಎಗ್ಗಿಲ್ಲದೆ ಮಾಡುತ್ತಾರೆಂದರೆ ಅದೆಂಥ ಹೀನ ಮಾನಸಿಕ ಸ್ಥಿತಿ ತಲುಪಿದ್ದೇವೆ ಎಂದು ನಾಚಿಕೆಪಡಬೇಕು.
ಸ್ನಾನ ಮುಗಿಸಿ ಶುಭ್ರವಾಗಿ ಉಪವಾಸವಿದ್ದು ಹೂವು ಹಣ್ಣು ಪ್ರಸಾದಗಳೊಂದಿಗೆ ದೇವಸ್ಥಾನಕ್ಕೆ ಹೋಗಿ ಸಂಕಲ್ಪಗಳನ್ನು ಈಡೇರಿಸು ಭಗವಂತ ಎಂದು ಬೇಡಿಕೊಳ್ಳುವ ಡಾಂಭಿಕರಿಗೆ ಗಲೀಜು ಜಾಗದಲ್ಲಿ ದೇವರ ಪಟ ಇಡಬಾರದು, ಅದರ ಮುಂದೆಯೇ ಸುಸ್ಸು ಮಾಡಬಾರದೆಂಬ ಕನಿಷ್ಠ ಜ್ಞಾನ ಇರುವುದಿಲ್ಲವೇ? ಇದೆಂಥ ನಾಗರಿಕ ಪ್ರಜ್ಞೆ ಎಂದು ಅಸಹ್ಯವೆನಿಸುತ್ತದೆ. ಮನುಷ್ಯನ ಇಂಥ ದ್ವಂದ್ವ ನಿಲುವನ್ನು ಕಂಡರೆ ಜೇಡರ ದಾಸಿಮಯ್ಯನ ವಚನವು ನೆನಪಾಗುತ್ತದೆ.
“ಬರುಸಟೆಗನ ಭಕ್ತಿ ದಿಟವೆಂದು ನೆಚ್ಚಲು ಬೇಡ
ಮಠದೊಳಗಣ ಬೆಕ್ಕು ಇಲಿಯ ಕಂಡು
ಪುಟ ನೆಗೆದಂತಾಯ್ತು ಕಾಣಾ ರಾಮನಾಥ”
ಮನುಷ್ಯನು ತನ್ನ ಅಂತರಂಗದಲ್ಲೊಂದು ಭಾವ, ಬಹಿರಂಗದಲ್ಲಿನ್ನೊಂದು ನಡೆ ಹೊಂದಿರುವುದರಿಂದಲೇ ಸ್ವಾರ್ಥ, ಅಸೂಯೆ, ಅನ್ಯಾಯ, ಅಕ್ರಮಗಳು ಎಗ್ಗಿಲ್ಲದೆ ನಡೆಯುತ್ತಿವೆ ಎನ್ನಬಹುದೇನೋ!. ಹಕ್ಕಿಯಂತೆ ಹಾರುವುದನ್ನು ಕಲಿತು, ಮೀನಿನಂತೆ ಈಜುವುದನ್ನು ರೂಢಿಸಿಕೊಂಡು ಮಾನವೀಯ ಮೌಲ್ಯಗಳುಳ್ಳ ಮನುಜನಂತೆ ಬಾಳುವುದನ್ನು ಮರೆತಿರುವುದು ವಿಪರ್ಯಾಸವೇ ಸರಿ.
ಇಷ್ಟೇ ಅಲ್ಲ, ಬಸ್ಸಿನಲ್ಲಿ ಪಯಣಿಸುವಾಗ ಹಿಂದಿನ ಸೀಟಿನವರಿಗೆ ಸಿಡಿಯುತ್ತದೆ ಎಂದು ಯೋಚಿಸದೆ ಕಿಟಕಿಯಿಂದಾಚೆಗೆ ಉಗುಳುವುದು ತಪ್ಪು ಎಂಬ ಅರಿವಿಲ್ಲದೆ ವರ್ತಿಸುವವರಿಗೇನು ಕಡಿಮೆ ಇಲ್ಲ, ಪಯಣದ ಬಳಲಿಕೆ, ಬೇಸರ ಕಳೆಯಲು ತಿನ್ನುವ ಸ್ನ್ಯಾಕ್ಸ್ ಪೊಟ್ಟಣಗಳು, ಬಾಳೆಹಣ್ಣು ಸಿಪ್ಪೆ, ಗುಟ್ಕಾ ಪಾನ್ ಪರಾಗ್ ಗಳನ್ನು ಮನಸ್ಸಿಗೆ ಬಂದಂತೆ ಎಸೆದು ಹೋಗುವವರಿಗೆ ಮನಃಸಾಕ್ಷಿ ಎನ್ನುವುದೇ ಇರುವುದಿಲ್ಲವೆ?
ಇನ್ನು ಪಬ್ಲಿಕ್ ಟಾಯ್ಲೆಟ್ ಗಳ ಕತೆ ಇನ್ನೂ ಶೋಚನೀಯ ಮತ್ತು ಯೋಚನೀಯ. ಶೌಚ ಕ್ರಿಯೆ ಮುಗಿಸಿದ ತರುವಾಯ ಸರಿಯಾಗಿ ನೀರು ಹಾಕಲು ಅಸಡ್ಡೆ. ನೀಟಾಗಿ ಫ್ಲೆಷಿಂಗ್ ಮಾಡಲು ಇವರಿಗೇ ಅಸಹ್ಯ ಎನಿಸಿದರೆ ಅದನ್ನು ಬಳಸಲು ಬರುವ ಇತರರಿಗೆ ಏನನ್ನಿಸಬಹುದು. ರೈಲುಗಳ ಶೌಚಾಲಯಗಳಂತೂ ಯಾವಾಗಲೂ ಗಬ್ಬು ನಾರುತ್ತಿರಲು ಕಾರಣ ಬಳಸುವವರೆ ತಾನೆ.
ಮೂತ್ರ ವಿಸರ್ಜನೆ ಮಾಡಿ ನೀರು ಹಾಕದೆ ಹೊರಬರುವುದರಿಂದ, ಮಲ ವಿಸರ್ಜನೆ ಮುಗಿಸಿ ಸ್ವಚ್ಛಗೊಳಿಸದೆ ಬಿಡುವುದರಿಂದ ಗಬ್ಬು ನಾರದೆ ಘಮಘಮಿಸುವುದೇ? ಪ್ರತಿಯೊಬ್ಬ ಪ್ರಯಾಣಿಕನೂ ವೈಯಕ್ತಿಕವಾಗಿ ಶುಚಿತ್ವದ ಕಡೆಗೆ ಗಮನ ವಹಿಸಿ ಜವಾಬ್ದಾರಿಯಿಂದ ನಡೆದುಕೊಂಡರೆ ನಮ್ಮ ಸ್ವಚ್ಛ ಭಾರತ ಪರಿಕಲ್ಪನೆ ಪ್ರತಿಶತ ನೂರರಷ್ಟು ಸಾಕಾರವಾಗಬಲ್ಲದಲ್ಲದೆ ಆರೋಗ್ಯ ಭಾರತ ನಿರ್ಮಾಣಕ್ಕೂ ಕೈಜೋಡಿಸಿದಂತಾಗುತ್ತದೆ.
ಸಾರ್ವಜನಿಕ ಶೌಚಾಲಯಗಳ ಒಳಗೋಡೆಗಳಲ್ಲಂತೂ ಅತ್ಯಂತ ಅಸಹ್ಯವಾದ ಅಶ್ಲೀಲ ಬರಹಗಳನ್ನು, ವಾಕರಿಕೆ ತರುವ ಚುಟುಕಗಳನ್ನು ಬರೆಯುವುದು ಕೆಲವು ಯುವಕರಿಗೆ ಒಂದು ದೊಡ್ಡ ಚಾಳಿಯಾಗಿಬಿಟ್ಟಿದೆ. ಕವನ ಕಟ್ಟುವ ಅದೇ ಪ್ರತಿಭೆಯನ್ನು ಒಳ್ಳೆಯ ವಿಷಯಗಳಿಗೆ ಬಳಸಿಕೊಂಡರೆ ತಾನೊಬ್ಬ ಉತ್ತಮ ಬರಹಗಾರ, ಸಾಹಿತಿಯಾಗಿ ಬೆಳೆಯಬಹುದೆಂಬ ಪರಿಜ್ಞಾನ ಇರಬೇಕಿತ್ತು. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಗುಟ್ಕಾ ಜಗಿಯುವ ಕೆಲವರು ಸಾರ್ವಜನಿಕ ಸ್ಥಳಗಳ ಸಂದಿಗೊಂದಿಗಳಲ್ಲಿ, ಕಟ್ಟಡಗಳ ಮೆಟ್ಟಿಲು ಹತ್ತುವ ಮೂಲೆ ಮೂಲೆಗಳಲ್ಲಿ ಪಿಚಕ್ ಎಂದು ಉಗುಳುವ ದುರಭ್ಯಾಸ ಇಟ್ಟುಕೊಂಡಿರುವುದನ್ನು (ಕೆಲವರಿಗೆ ಮಾತ್ರ ಅನ್ವಯ) ಅಲ್ಲಿ ಹತ್ತಿದ ಕೆಂಪು ಕಲೆಯೇ ಸಾರಿ ಹೇಳುತ್ತದೆ. ‘ಇಲ್ಲಿ ಉಗುಳಬಾರದು’ ಎಂಬ ದೊಡ್ಡಕ್ಷರಗಳ ಸೂಚನೆಯ ಭಾಗವು ನಮಗಾಗಿಯೇ ಇರುವುದೆಂದು ಅಪಾರ್ಥವಾಗಿ ಭಾವಿಸಿದಂತಿದೆ.
ಪವಿತ್ರ ಸ್ನಾನ ಮಾಡಿದರೆ ಪಾಪಕರ್ಮಗಳು ಕಳೆದು ಪುಣ್ಯ ಪ್ರಾಪ್ತಿಯಾಗುವುದೆಂದು ನಂಬುವವರು ವಿಶೇಷ ದಿನಗಳಲ್ಲಿ (ಉದಾ: ಮಹಾಕುಂಭ ಮೇಳ) ನದಿಗಳಿಗೆ ಹೋಗಿ ಸ್ನಾನ ಮಾಡಿದ ನಂತರ ಹಳೆಯ ಹರಿದ ಬಟ್ಟೆಗಳನ್ನು ನದಿ ದಂಡೆಯಲ್ಲಿಯೇ ಬಿಸಾಡುವುದು, ಪಾಲಿಥೀನ್ ಕವರ್ ಗಳು, ಸವೆದ ಸೋಪು, ಪೂಜಾ ಸಾಮಾಗ್ರಿಗಳ ತ್ಯಾಜ್ಯಗಳನ್ನು ಅಲ್ಲೇ ಬಿಡುವುದು,,,, ಹೀಗೆ ಹತ್ತು ಹಲವು ಸಂದರ್ಭಗಳಲ್ಲಿ ನಾವು ಅನಾಗರಿಕರಂತೆ ಮತ್ತೆ ಮತ್ತೆ ನಡೆದುಕೊಳ್ಳುತ್ತಿದ್ದೇವೆ. ವೈಜ್ಞಾನಿಕವಾಗಿ ಎಷ್ಟು ಮುಂದುವರೆದರೇನು ಫಲ ಎಂಬ ಪ್ರಶ್ನೆ ಕಾಡುತ್ತದೆ. ನಿಜಕ್ಕೂ ಇಲ್ಲಿ ಪ್ರಸ್ತಾಪಿಸಿದ ಸಂಗತಿಗಳು ಮಾತ್ರವಲ್ಲ. ಇನ್ನೂ ಅನೇಕ ಸಂದರ್ಭಗಳಲ್ಲಿ ನಾವು ಅನಾಗರಿಕರಂತೆ, ಅಶಿಕ್ಷಿತರಂತೆ, ಅವಿವೇಕಿಗಳಂತೆ ನಡೆದುಕೊಳ್ಳುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ.
ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಂಡು ಬಾಳಿದರೆ ಮಾತ್ರ ಒಂದಿಷ್ಟು ಮೌಲ್ಯಗಳು ಉಳಿಯಬಲ್ಲವು. ಇಲ್ಲದಿದ್ದರೆ ಸಾಧು ಸಂತರ ಹಿತನುಡಿಗಳು, ಸಾಧಕರ ಸೂಕ್ತಿಗಳು, ಹಿರಿಯರ ಬುದ್ಧಿ ಮಾತುಗಳು ಅರ್ಥ ಕಳೆದುಕೊಳ್ಳುತ್ತವೆ.
ಕುವೆಂಪು ಅವರು ಹೇಳಿದಂತೆ “ಜಗತ್ತಿನಲ್ಲಿ ಸುಭಾಷಿತಗಳೆಲ್ಲವನ್ನು ಹೇಳಿ ಆಗಿದೆ. ಇನ್ನೇನಿದ್ದರೂ ಅವುಗಳನ್ನು ಪಾಲಿಸಬೇಕಷ್ಟೇ!”. ಹೇಳುವುದಕ್ಕೆ ಇನ್ನೇನೂ ಉಳಿದಿಲ್ಲ ಅಲ್ಲವೇ. ಸಾಧ್ಯವಾದಷ್ಟು ಪಾಲಿಸೋಣ, ಸಭ್ಯತೆಯಿಂದ ನಡೆದುಕೊಂಡು ಸುಸಂಸ್ಕೃತರಾಗಿ ಬಾಳೋಣ.
~~~~~~~~~~
~ಹೊ.ರಾ.ಪರಮೇಶ್ ಹೊಡೇನೂರು
#7022765372
