ಚನ್ನರಾಯಪಟ್ಟಣ, ಮಾ.20: ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕರಾದ ದಿವಂಗತ ಪಟೇಲ್ ಮಂಜುನಾಥ್ ಅವರ ಸುಪುತ್ರಿ ಶ್ರೀಮತಿ ಅರ್ಪಿತಾ ಪಟೇಲ್ ಅವರು ಈ ದಿನದಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಘೋಷಣೆ ಮಾಡಿದರು.
ತಮ್ಮ ನಿವಾಸದಲ್ಲಿ ಬಿಜೆಪಿ ಪಕ್ಷದ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ತಮ್ಮ ಪೂಜ್ಯ ತಂದೆಯವರಾದ ಪಟೇಲ್ ಮಂಜುನಾಥ್ ಅವರ ಆಶಯದಂತೆ, ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಕಟ್ಟಲು ಶ್ರಮಿಸುವುದಾಗಿ ತಿಳಿಸಿದರು.
ಅದರ ಜೊತೆಗೆ, ಚನ್ನರಾಯಪಟ್ಟಣ ತಾಲೂಕಿನ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿಯವರ ಜನಪರ ಯೋಜನೆಗಳನ್ನು ಪರಿಚಯಿಸಿ, ಹೆಚ್ಚಿನ ಮಹಿಳೆಯರನ್ನು ಬಿಜೆಪಿ ಪಕ್ಷದತ್ತ ಸೆಳೆಯುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಹಿರಿಯ ಬಿಜೆಪಿ ಮುಖಂಡ ನಂಜುಂಡ ಮೈಮ್, ದಿವಂಗತ ಪಟೇಲ್ ಮಂಜುನಾಥ್ ಅವರು ಕಳೆದ 35 ವರ್ಷಗಳಿಂದ ಬಿಜೆಪಿ ಪಕ್ಷವನ್ನು ಕಟ್ಟುವಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡ ನಿಷ್ಠಾವಂತ ನಾಯಕರು ಎಂದು ಸ್ಮರಿಸಿದರು. ಅವರ ಸುಪುತ್ರಿಯಾದ ಅರ್ಪಿತಾ ಪಟೇಲ್ ಅವರು ಪಕ್ಷದಲ್ಲಿ ಮಹಿಳಾ ಪದಾಧಿಕಾರಿಯಾಗಿ ನೇಮಕಗೊಂಡಿರುವುದು ಸಂತಸದ ವಿಚಾರವಾಗಿದ್ದು, ಈ ಕ್ಷಣದಿಂದಲೇ ಮಹಿಳಾ ಘಟಕವನ್ನು ಸಕ್ರಿಯವಾಗಿ ಸಂಘಟಿಸಿ, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬೂತ್ ಮಟ್ಟದಿಂದ ಪಕ್ಷ ಬಲಪಡಿಸಬೇಕು ಎಂದು ಸಲಹೆ ನೀಡಿದರು.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಪರಮ ಗಂಗಾಧರ್ ಮಾತನಾಡಿ, ದಿವಂಗತ ಪಟೇಲ್ ಮಂಜುನಾಥ್ ಅವರ ಕುಟುಂಬದವರು ಮತ್ತೆ ಪಕ್ಷದ ಚಟುವಟಿಕೆಯಲ್ಲಿ ಮುಂಚೂಣಿಗೆ ಬರುತ್ತಿರುವುದು ಸಂತಸದ ವಿಷಯವಾಗಿದೆ. ಅರ್ಪಿತಾ ಪಟೇಲ್ ಅವರ ನೇತೃತ್ವದಲ್ಲಿ ಮಹಿಳಾ ಘಟಕ ಸಕ್ರಿಯವಾಗಿ ಕಾರ್ಯನಿರ್ವಹಿಸಿ, ಬಿಜೆಪಿ ಪಕ್ಷವನ್ನು ಇನ್ನಷ್ಟು ಬಲಪಡಿಸಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪರಮ ಗಂಗಾಧರ್, ತಾಲೂಕು ಪ್ರಧಾನ ಕಾರ್ಯದರ್ಶಿ ಗನ್ನಿ ವಿಶ್ವನಾಥ್, ತಾಲೂಕು ಉಪಾಧ್ಯಕ್ಷ ನಟರಾಜ್, ತಾಲೂಕು ಕಾರ್ಯದರ್ಶಿ ಸಾತೇನಹಳ್ಳಿ ವಿಶ್ವನಾಥ್, ಜಿಲ್ಲಾ ಕಾರ್ಯದರ್ಶಿ ತೂಬಿನಕೆರೆ ಗಿರೀಶ್, ಹಿರಿಯ ಬಿಜೆಪಿ ಮುಖಂಡರಾದ ನಂಜುಂಡ ಮೈಮ್, ವೆಂಕಟೇಶಚಾರ್, ಸುಂಡಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರು ಹಾಗೂ ಬಿಜೆಪಿ ಯುವ ಮುಖಂಡ ಹೊಸಹಳ್ಳಿ ಸತೀಶ್ ಸೇರಿದಂತೆ ಪಕ್ಷದ ಹಲವು ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
– ಮಂಜುನಾಥ್ ಐ.ಕೆ
