ಬೆಂಗಳೂರು (ದೇವನಹಳ್ಳಿ): ಪಟ್ಟಣದ ಹೊರವಲಯ ರಾಣಿ ಕ್ರಾಸ್ ಸಮೀಪ ಶನಿವಾರ ಮಧ್ಯಾಹ್ನ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರು ಯುವಕರನ್ನು ದೇವನಹಳ್ಳಿ ಟೌನ್ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಜಯನಗರದ ಮೊಹಮ್ಮದ್ ಜಾಯಿದ್, ಮೊಹಮ್ಮದ್ ಫೈಜಾಲ್, ಸೈಯದ್ ಇಸ್ಮಾಯಿಲ್ ಪಾಷ ಬಂಧಿತರು. ಆರೋಪಿತರನ್ನು ದೇವನಹಳ್ಳಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ರಾಣಿ ಕ್ರಾಸ್ ಸಮೀಪದ ಖಾಸಗಿ ಬಡಾವಣೆಯಲ್ಲಿ ಗಾಂಜಾ ಸೊಪ್ಪು ಕಳ್ಳ ಸಾಗಣೆ ಹಾಗೂ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಕಾರ್ಯಾಚರಣೆ ಸಮಯದಲ್ಲಿ ಆರೋಪಿತರ ಬಳಿ ಇದ್ದ ಬ್ಯಾಗ್ ಪರಿಶೀಲನೆ ಮಾಡಿದಾಗ ತೂಕದ ಯಂತ್ರ, ಗಾಂಜಾ ಕೊಂಡೊಯ್ಯಲು ಸಣ್ಣ, ಸಣ್ಣ ಪ್ಲಾಸ್ಟಿಕ್ ಕವರ್, ಹಾಗೂ 3.2 ಕೆ.ಜಿ ತೂಕದ ಗಾಂಜಾ ಸೊಪ್ಪು ದೊರೆತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಶಕ್ಕೆ ಪಡೆಯಲಾದ ಗಾಂಜಾದ ಮಾದಕ ವಸ್ತುವಿನ ಮೌಲ್ಯವೂ ₹1.3 ಲಕ್ಷ ಎಂದು ಅಂದಾಜಿಸಲಾಗಿದೆ. ಬಿಟಿಎಂ ಬಡಾವಣೆಯ ಮೊಹಮ್ಮದ್ ಜಾಯಿದ್ ಎಂಬಾತನಿಂದ ಗಾಂಜಾ ಖರೀದಿ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.

ಕಾರ್ಯಾಚರಣೆಯಲ್ಲಿ ಎಸಿಪಿ ನವೀನ್ ಕುಮಾರ್, ಪಿಎಸ್ಐ ಬಾಲಕೃಷ್ಣ, ಸಿಬ್ಬಂದಿಗಳಾದ ವೆಂಕಟೇಶ್ ಮರಿಗೌಡರ್, ನಾಗೇಶ್ ಪಾಟೀಲ್, ನಾಗರಾಜ್ ಸಜ್ಜನ, ಗಿರೀಶ್ , ಮೊಹಮ್ಮದ್ ಇಲಿಯಾಸ್ ,ಅಮೀತ್, ಭಾಗವಹಿಸಿದ್ದು, ಸಿಬ್ಬಂದಿಯ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಪ್ರಶಂಶಿಸಿದ್ದಾರೆ.
