ಚನ್ನರಾಯಪಟ್ಟಣ, ಜುಲೈ 21 – ಚನ್ನರಾಯಪಟ್ಟಣದ ಗಾಂಧಿ ಸರ್ಕಲ್ನ ರಂಗಮಂದಿರದಲ್ಲಿ ನಡೆಯುತ್ತಿರುವ 354ನೇ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ಅಂಗವಾಗಿ, ಮುಕ್ಕೋಟಿ ದೇವರ ಸ್ವರೂಪವಾದ ಕಾಮಧೇನುರವರ ಭವ್ಯ ಆಗಮನ ಕಂಡುಬಂತು.
ಪರಮಪೂಜ್ಯ ಶ್ರೀ ಶ್ರೀ ಡಾ. ಸುಬುಧೇಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದದಿಂದ, ಆಂಧ್ರಪ್ರದೇಶದ ಪುಂಗನೂರುದಿಂದ ಪವಿತ್ರ ಕಾಮಧೇನುವನ್ನು ಚನ್ನರಾಯಪಟ್ಟಣಕ್ಕೆ ತರಲಾಯಿತು. ಶ್ರೀ ರಾಘವೇಂದ್ರ ಸ್ವಾಮಿಗಳ ಪೀಠ, ಉಯ್ಯಾಲೆ, ಮತ್ತು ಕಾಮಧೇನುವನ್ನು 40 ಅಡಿ ಆಂಜನೇಯ ದೇವಸ್ಥಾನದಿಂದ ಮಂಗಳವಾದ್ಯಗಳೊಂದಿಗೆ ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು. ಮಹಿಳೆಯರು ಕಳಸ ಹೊತ್ತು ಪಾಲ್ಗೊಂಡು ಶ್ರದ್ಧಾಭಕ್ತಿಯಿಂದ ಮೆರವಣಿಗೆಯ ಆಕರ್ಷಣೆಯಾಗಿ ನಿಂತರು.
ರಂಗಮಂದಿರದ ಬಳಿ ನೆರೆದ ನೂರಾರು ಭಕ್ತರ ಸಮ್ಮುಖದಲ್ಲಿ, ಆಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಜೊತೆಗೇ ಕಾಮಧೇನುವಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಲಾಯಿತು. ನಂತರ ಮಹಾ ಮಂಗಳಾರತಿ, ತೀರ್ಥ ಹಾಗೂ ಪ್ರಸಾದ ವಿನಿಯೋಗ ನಡೆಯಿತು.
ಭಕ್ತರು ಗೋಮಾತೆಯ ಪಾದಸ್ಪರ್ಶ ಮಾಡಿ ಆಶೀರ್ವಾದ ಪಡೆದರು, ಈ ಮೂಲಕ ಆರಾಧನೆಗೆ ಆಧ್ಯಾತ್ಮಿಕ ಮೆರಗು ಸಿಕ್ಕಿತು. ಧಾರ್ಮಿಕ ಶ್ರದ್ಧೆ, ಭಕ್ತರ ಸೇವಾ ಸ್ಪೂರ್ತಿ ಮತ್ತು ಸಂಸ್ಕೃತಿಯ ಸಂಯೋಜನೆಯಾಗಿದ್ದ ಈ ಸಂದರ್ಭ, ಸ್ಥಳೀಯರಲ್ಲೂ ಭಕ್ತಿಭಾವ ಹೆಚ್ಚುವರಿ ಮೂಡಿಸಿದಂತಾಯಿತು.
- ಮಂಜುನಾಥ್ ಐ.ಕೆ
