ಹಾಸನ- ನಗರದ ಹಿಮ್ಸ್ ಆಸ್ಪತ್ರೆಯ ಕರ್ತವ್ಯ ನಿರತ ಸ್ನಾತಕೋತ್ತರ ವೈದ್ಯರ ಮೇಲೆ ರೋಗಿಯ ಕಡೆಯವರು ಹಲ್ಲೆ ಮಾಡಿದ್ದನ್ನು ಖಂಡಿಸಿ ರಾತ್ರೋರಾತ್ರಿ ನೂರಾರು ವಿದ್ಯಾರ್ಥಿಗಳು ಕರ್ತವ್ಯ ಬಹಿಷ್ಕರಿಸಿ ದಿಢೀರ್ ಪ್ರತಿಭಟನೆ ನಡೆಸಿದರು. ಹೋರಾಟಕ್ಕೆ ವೈದ್ಯರು, ಇತರೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕೈಜೋಡಿಸಿದರು.
ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆ ಎಂಬ ಸರ್ಕಾರಿ ಆದೇಶ ಇದ್ದರೂ, ಈ ರೀತಿಯ ಘಟನೆಗಳು ಆಗಾಗ ಮರುಕಳಿಸುತ್ತಲೇ ಇವೆ. ಹೀಗಾಗಿ ತಪ್ಪು ಮಾಡಿರುವವರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು. ಕೂಡಲೇ ಅವರನ್ನು ಬಂಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸೋಮವಾರ ರಾತ್ರಿ ಗಾಯಗೊಂಡು ವ್ಯಕ್ತಿಯೊಬ್ಬರು ಆಸ್ಪತ್ರೆಗೆ ಬಂದಿದ್ದರು. ಅವರೊಂದಿಗೆ ಮೂವರು ಆಗಮಿಸಿದ್ದರು. ಈ ವೇಳೆ ಕರ್ತವ್ಯ ನಿರತ ವೈದ್ಯರು ಬೇರೆ ರೋಗಿಗೆ ಚಿಕಿತ್ಸೆ ನೀಡುತ್ತಿದ್ದರು.
ಆದರೂ ನಮ್ಮ ಕಡೆಯವರಿಗೆ ಚಿಕಿತ್ಸೆ ನೀಡಿ ಎಂದು ಗಾಯಾಳು ಕಡೆಯವರು ದುರ್ವರ್ತನೆ ತೋರಿದ್ದಾರೆ ಎನ್ನಲಾಗಿದೆ. ವೈದ್ಯರನ್ನು ಎಳೆದುಕೊಂಡು ಹೋಗಿ ಮೊದಲು ನಮ್ಮವರಿಗೆ ಚಿಕಿತ್ಸೆ ಕೊಡಿ ಎಂದು ಗದರಿಸಿದ್ದಾರೆ. ಸ್ವಲ್ಪ ನಿಧಾನಿಸಿ ಎಂದರೂ ಕೇಳದೆ ಹಲ್ಲೆ ಮಾಡಿದ್ದು, ಓರ್ವ ವೈದ್ಯರ ಮುಖದಲ್ಲಿ ರಕ್ತ ಹೆಪ್ಪುಗಟ್ಟಿದೆ ಎಂದು ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ ಸುದ್ದಿಗಾರರಿಗೆ ತಿಳಿಸಿದರು.
ಕರ್ತವ್ಯ ನಿರತ ಸರ್ಕಾರಿ ವೈದ್ಯರ ಮೇಲೆ ಹಲ್ಲೆ ಸಂಬಂಧ ಹಿಮ್ಸ್ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿ ಕಳೆದ ರಾತ್ರಿಯೇ ನಗರಠಾಣೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ನಡುವೆ ಹಿಮ್ಸ್ ನಿರ್ದೇಶಕ ಡಾ.ರಾಜಣ್ಣ, ವೈದ್ಯಕೀಯ ಅಧೀಕ್ಷಕ ಡಾ.ರಾಘವೇಂದ್ರ ಪ್ರಸಾದ್ ಮೊದಲಾದವರು ಘಟನೆ ಖಂಡಿಸಿ ಹಾಗೂ ಸೂಕ್ತ ರಕ್ಷಣೆಗೆ ಕೋರಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.
