
ನನ್ನ ಜೀವನವೇ ಬದಲಾಯ್ತು ಎಂದ ಆಟೋ ಚಾಲಕ ಭಜನ್ ಸಿಂಗ್!
ನನ್ನ ಜೀವನವೇ ಬದಲಾಯ್ತು ಎಂದ ಭಜನ್ ಸಿಂಗ್!
ಮುಂಬೈ: ನನ್ನ ಜೀವನವೇ ಬದಲಾಗಿದೆ… ಇದು ಚಾಕು ದಾಳಿಗೆ ಒಳಗಾದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರನ್ನು ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕ ಭಜನ್ ಸಿಂಗ್ ರಾಣಾ ಅವರು ಹೇಳಿದ ಮಾತುಗಳಿವು.
ಕಳೆದ ವಾರ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಸೈಫ್ ಅಲಿ ಖಾನ್, ಚಾಕುವಿನಿಂದ ಹಲ್ಲೆಗೊಳಗಾದ ನಂತರ ಆಟೋ ಚಾಲಕ ಭಜನ್ ಸಿಂಗ್, ಸೈಫ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.
ಹೀಗಾಗಿ ಇತ್ತೀಚೆಗಷ್ಟೇ ಸೈಫ್, ಭಜನ್ ಸಿಂಗ್ರನ್ನು ತಮ್ಮ ಬಳಿಗೆ ಕರೆಸಿಕೊಂಡು ಕೃತಜ್ಞತೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಸೈಫ್, ಚಾಲಕನಿಗೆ ಆರ್ಥಿಕ ಸಹಾಯ ಮಾಡಿದ್ದಾರೆಂದು ಹೇಳಲಾಗಿದೆ. ಎಷ್ಟು ಹಣ ಕೊಟ್ಟಿದ್ದಾರೆಂಬುದು ಬಹಿರಂಗವಾಗಿಲ್ಲ. ಆದರೆ, ಸುಮಾರು 50,000 ರೂ. ಕೊಟ್ಟಿದ್ದಾರೆಂದು ರಾಷ್ಟ್ರೀಯ ಪೋರ್ಟಲ್ ಒಂದು ವರದಿ ಮಾಡಿದೆ. ಆದರೆ, ಅದಕ್ಕಿಂತಲೂ ಹೆಚ್ಚಿನ ಹಣವನ್ನು ಸೈಫ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಉತ್ತರಾಖಂಡ ಮೂಲದ ಭಜನ್ ಸಿಂಗ್, ನಾನು ಅವರಿಗೆ (ಸೈಫ್) ಭರವಸೆ ನೀಡಿದ್ದೇನೆ ಮತ್ತು ನಾನು ಅದನ್ನು ಪಾಲಿಸುತ್ತೇನೆ. ಅವರು (ಸೈಫ್) ನನಗೆ 50,000 ಅಥವಾ 1,00,000 ರೂಪಾಯಿ ನೀಡಿದರು ಎಂದು ಜನರು ಹೇಳಬಹುದು. ಆದರೆ, ಅವರು ಎಷ್ಟು ಹಣ ನೀಡಿದರು ಎಂದು ನಾನು ಹೇಳಲು ಬಯಸುವುದಿಲ್ಲ ಎಂದರು.
ಹಣದ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಬೇಡಿ ಎಂದು ಸೈಫ್ ಅವರು ನನ್ನನ್ನು ವಿನಂತಿಸಿಕೊಂಡರು. ನಾನು ಅವರಿಗೆ ನೀಡಿದ ಭರವಸೆಯನ್ನು ಉಳಿಸಿಕೊಳ್ಳುತ್ತೇನೆ. ಏನೇ ಆದರೂ, ಅವರು ಏನೇ ಕೊಟ್ಟರೂ ಅದು ಅವರ ಮತ್ತು ನನ್ನ ನಡುವೆ ಮಾತ್ರ ಇರುತ್ತದೆ ಎಂದು ಭಜನ್ ಸಿಂಗ್ ಹೇಳಿದರು.
ನಾನು ಅವರನ್ನು (ಸೈಫ್) ಆಸ್ಪತ್ರೆಯಲ್ಲಿ ಭೇಟಿಯಾದೆ. ನನ್ನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಕ್ಕಾಗಿ ಧನ್ಯವಾದ ಹೇಳಲು ಅವರು ಕರೆ ಮಾಡಿದರು. ಸೈಫ್ ಅವರು ನನ್ನನ್ನು ಅವರ ತಾಯಿಗೆ (ಶರ್ಮಿಳಾ ಟ್ಯಾಗೋರ್) ಪರಿಚಯಿಸಿದರು. ನಾನು ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದೆ. ಬಳಿಕ ಅವರಿಗೆ ಅನಿಸಿದ್ದನ್ನು ನನಗೆ ನೀಡಿದರು ಮತ್ತು ನನಗೆ ಸಹಾಯ ಬೇಕಾದಾಗಲೆಲ್ಲ ಜತೆಯಲ್ಲಿ ಇರುವುದಾಗಿ ಭರವಸೆ ನೀಡಿದರು ಎಂದು ಭಜನ್ ಸಿಂಗ್ ಹೇಳಿದ್ದಾರೆ
ಸೈಫ್ ಅಲಿ ಖಾನ್ ಅವರನ್ನು ತಮ್ಮ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಕರೆದೊಯ್ದ ಸುದ್ದಿಯ ನಂತರ, ಮಾಧ್ಯಮಗಳು, ಸ್ನೇಹಿತರು ಮತ್ತು ಸಂಬಂಧಿಕರಿಂದ ನನಗೆ ತುಂಬಾ ಕರೆಗಳು ಬರಲು ಪ್ರಾರಂಭಿಸಿದವು ಎಂದು ರಾಣಾ ಇದೇ ಸಂದರ್ಭದಲ್ಲಿ ಹೇಳಿದರು.