ಹಾಸನ, ಏಪ್ರಿಲ್ 11: ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ರೋಟ್ರಾಕ್ಟ್ ಕ್ಲಬ್ ವತಿಯಿಂದ “ಆಟೋ ಎಕ್ಸ್ ಪೋ–2026” ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು. ಕಾಲೇಜು ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಮಾದರಿಯ ಹೊಸ ಕಾರುಗಳು ಮತ್ತು ಬೈಕ್ಗಳ ಪ್ರದರ್ಶನ ಪ್ರೇಕ್ಷಕರನ್ನು ರಂಜಿಸಿತು.

ಆಟೋ ಶೋನಲ್ಲಿ ಭಾಗವಹಿಸಿದ ವಾಹನಗಳು ಗರ್ಜನೆಯೊಂದಿಗೆ ಮೈದಾನದಲ್ಲಿ ರೌಂಡ್ ಹಾಕಿ, ಸೈಲೆನ್ಸರ್ನಿಂದ ಬೆಂಕಿ ಉಗುಳುತ್ತಾ ಸಾಹಸ ಪ್ರದರ್ಶನ ನೀಡಿದವು. ವೇಗದ ಓಟ ಮತ್ತು ಶಬ್ದಗಳ ನಡುವೆ ಕಾರುಗಳು ದೂಳು ಎಬ್ಬಿಸುತ್ತಾ ಮೈದಾನದಲ್ಲಿ ಸಂಚರಿಸಿದ ದೃಶ್ಯಗಳು ಪ್ರೇಕ್ಷಕರಿಗೆ ರೋಮಾಂಚನ ಮೂಡಿಸಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಟಿ. ದ್ಯಾವೆಗೌಡ ವಹಿಸಿ ಮಾತನಾಡಿ, “ಹಿಂದೆ ಅಂಬಾಸಿಡರ್ ಕಾರುಗಳ ಕಾಲ ಇತ್ತು. ಈಗ ಕಾಲ ಬದಲಾಗಿದ್ದು, ನೂತನ ಮಾದರಿಯ ಕಾರುಗಳು ಮತ್ತು ಬೈಕ್ಗಳು ಮಾರುಕಟ್ಟೆಗೆ ಬರುತ್ತಿವೆ. ಗ್ರಾಹಕರು ಹೊಸ ತಂತ್ರಜ್ಞಾನ ವಾಹನಗಳನ್ನು ಖರೀದಿಸಿ ಸಂತೋಷಪಡುತ್ತಿದ್ದಾರೆ,” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್, “ವಿಜ್ಞಾನ ಮತ್ತು ತಾಂತ್ರಿಕತೆ ಬೆಳವಣಿಗೆಯಿಂದ ಹೊಸ ಹೊಸ ಅವಿಷ್ಕಾರಗಳೊಂದಿಗೆ ವಾಹನಗಳು ಮಾರುಕಟ್ಟೆಗೆ ಬರುತ್ತಿವೆ. ಇಂತಹ ಆಟೋ ಎಕ್ಸ್ ಪೋ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡುತ್ತವೆ,” ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿವಿಧ ಕಾರು ಮತ್ತು ಬೈಕ್ ಶೋರೂಮ್ಗಳು ತಮ್ಮ ವಾಹನಗಳನ್ನು ಪ್ರದರ್ಶನಕ್ಕಿಟ್ಟು ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಇನ್ಚಾರ್ಜ್ ಪ್ರಾಂಶುಪಾಲ ಡಾ. ರಾಜಣ್ಣ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಇಂದ್ರ ಬಹುದ್ದೂರು, ಸಹಾಧಿಕಾರಿ ಡಾ. ಶಿವಶಂಕರ್ ಹಾಗೂ ರೋಟ್ರಾಕ್ಟ್ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
– ಶಿವಕುಮಾರ್ ಕಟ್ಟಾಯ
