ಕೆ.ಆರ್.ಪೇಟೆ, ನವೆಂಬರ್ 09:ಪಾಂಡವಪುರ ತಾಲ್ಲೂಕಿನ ಪ್ರಥಮ ಶಾಸಕರಾಗಿದ್ದ ಹಾಗೂ ಪಿ.ಎಸ್.ಎಸ್.ಕೆ. ಸಹಕಾರ ಸಕ್ಕರೆ ಕಾರ್ಖಾನೆಯ ಸಂಸ್ಥಾಪಕರಾದ ಬಿ.ವೈ. ನೀಲೇಗೌಡರ 52ನೇ ಸಂಸ್ಮರಣಾ ದಿನಾಚರಣೆ ಕೆ.ಆರ್.ಪೇಟೆ ತಾಲ್ಲೂಕಿನ ಬಲ್ಲೇನಹಳ್ಳಿ ಗ್ರಾಮದಲ್ಲಿ ಭಾವಪೂರ್ಣವಾಗಿ ನಡೆಯಿತು.

ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆ ಹಾಗೂ ಬಲ್ಲೇನಹಳ್ಳಿ ಗ್ರಾಮಸ್ಥರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ನೀಲೇಗೌಡರ ಸಾಧನೆ, ವ್ಯಕ್ತಿತ್ವ ಮತ್ತು ಸಾಮಾಜಿಕ ಕಳಕಳಿ ಕುರಿತು ಹಿರಿಯ ಸಾಹಿತಿ ಚಿಕ್ಕಮರಳಿ ಬೋರೇಗೌಡರು ಸ್ಮರಣಾರ್ಥವಾಗಿ ಮಾತನಾಡಿದರು.

ಅವರು ಹೇಳಿದರು, “ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸುವ ಮೂಲಕ ಬಿ.ವೈ. ನೀಲೇಗೌಡರು ಲಕ್ಷಾಂತರ ರೈತರ ಜೀವನದಲ್ಲಿ ಬೆಳಕು ತಂದರು. ಅವರು ನಿಜವಾದ ರೈತ ನಾಯಕರಾಗಿದ್ದರು.”

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಂಬಾಡಿ ಅಣೆಕಟ್ಟಿನಿಂದ ಮಂಡ್ಯ ಜಿಲ್ಲೆಗೆ ಹಸಿರು ಪರಿಮಳ ನೀಡಿದಂತೆ, ಬಿ.ವೈ. ನೀಲೇಗೌಡರು ಸಹ ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ಕೆ.ಆರ್.ಪೇಟೆ ತಾಲ್ಲೂಕುಗಳ ರೈತರಿಗೆ ಕಬ್ಬು ಬೆಳೆ ಮತ್ತು ಸಹಕಾರ ಚಳವಳಿಯಿಂದ ಆರ್ಥಿಕ ಶಕ್ತಿಯನ್ನು ನೀಡಿದರು ಎಂದು ಅವರು ಸ್ಮರಿಸಿದರು.

ಬಲ್ಲೇನಹಳ್ಳಿಯಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದು, ನಂತರ ವಕೀಲರಾಗಿ ಸೇವೆ ಸಲ್ಲಿಸಿದ ನೀಲೇಗೌಡರು 1952 ಮತ್ತು 1962ರ ಮೈಸೂರು ವಿಧಾನಸಭಾ ಚುನಾವಣೆಯಲ್ಲಿ ಪಾಂಡವಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ರೈತರ ಸಹಕಾರದಿಂದ 1956ರಲ್ಲಿ ಪಿ.ಎಸ್.ಎಸ್.ಕೆ. ಸಕ್ಕರೆ ಕಾರ್ಖಾನೆಗೆ ಶಂಕುಸ್ಥಾಪನೆ ಮಾಡಿ, 1959ರಲ್ಲಿ ಕಬ್ಬು ನುರಿತ ಉತ್ಪಾದನೆ ಆರಂಭಿಸಿದ ಅವರ ಸೇವೆಯನ್ನು ಬೋರೇಗೌಡರು ಸ್ಮರಿಸಿದರು.

ಕಾರ್ಯಕ್ರಮವನ್ನು ಶಾಸಕರಾದ ಹೆಚ್.ಟಿ. ಮಂಜು ಉದ್ಘಾಟಿಸಿ ಮಾತನಾಡಿ, “ಬಿ.ವೈ. ನೀಲೇಗೌಡರು ನನ್ನ ವಿಧಾನಸಭಾ ಕ್ಷೇತ್ರದ ಹೆಮ್ಮೆ. ಅವರು ರೈತರಿಗೆ ಸಹಕಾರದ ಶಕ್ತಿ ತೋರಿಸಿದರು. ಅವರ ಕೆಲಸಗಳು ಇಂದಿಗೂ ಮಾದರಿಯಾಗಿವೆ,” ಎಂದರು.

ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು ನೀಲೇಗೌಡರ ಭಾವಚಿತ್ರವನ್ನು ಅನಾವರಣ ಮಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 80 ಮಂದಿ ಪ್ರಗತಿಪರ ರೈತರು ಹಾಗೂ ಹೂ ಬೆಳೆಗಾರರಿಗೆ ‘ನೀಲೇಗೌಡರ ಸಂಸ್ಮರಣಾ ಪ್ರಶಸ್ತಿ’ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕೆಂಗೇರಿಯ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿಶ್ಚಲಾನಂದನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, “ಸಮಾಜಮುಖಿ ಕಾರ್ಯ ಮಾಡಿದವರು ಜನಮನದಲ್ಲಿ ಶಾಶ್ವತ ಸ್ಥಾನ ಪಡೆದಿರುತ್ತಾರೆ. ನೀಲೇಗೌಡರ ಜೀವನ ಅದಕ್ಕೆ ದಾರಿದೀಪ,” ಎಂದರು.
ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯ ಅಧ್ಯಕ್ಷೆ ಹೆಚ್.ಎಲ್. ಯಮುನಾ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಕಾರ್ಯಕ್ರಮದಲ್ಲಿ ಬಿ.ಎಂ. ರಾಮಚಂದ್ರನ್, ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್, ಡಾ. ಬಲ್ಲೇನಹಳ್ಳಿ ವಿಜಯ್ಕುಮಾರ್, ಡಾ. ವಸಂತಕುಮಾರ್, ಡಾ. ಹರೀಶ್, ಪ್ರಶಾಂತ್, ನಂದೀಶ್, ಬಿ.ಎಸ್. ರಾಮು, ಸ್ವಾಮೀಗೌಡ ಸೇರಿದಂತೆ ಅನೇಕರು ಭಾಗವಹಿಸಿದರು.
-ಶ್ರೀನಿವಾಸ್ ಆರ್.
