ಚನ್ನರಾಯಪಟ್ಟಣ, ಏ.5: ಡಾ. ಬಾಬು ಜಗಜೀವನ್ ರಾಮ್ ಅವರು ದೇಶದ ಹಸಿವು ನೀಗಿಸಿದ ಅಪ್ಪಟ ರಾಷ್ಟ್ರೀಯವಾದಿಯಾಗಿದ್ದು, ಸುಧೀರ್ಘ 31 ವರ್ಷಗಳ ಕಾಲ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸಿ ತಮ್ಮ ಪ್ರಾಮಾಣಿಕತೆ, ದಕ್ಷತೆ ಮತ್ತು ಆಡಳಿತ ಸಾಮರ್ಥ್ಯವನ್ನು ಸಾಬೀತುಪಡಿಸಿದ ಮೇಧಾವಿ ರಾಜಕಾರಣಿಯಾಗಿದ್ದರು ಎಂದು ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ವಸತಿ ಕಾಲೇಜಿನ ಉಪನ್ಯಾಸಕ ರತ್ನಾಕರ್ ಎಂ.ಜೆ. ಹೇಳಿದರು.
ತಾಲೂಕು ಆಡಳಿತ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಡಾ. ಬಾಬು ಜಗಜೀವನ್ ರಾಮ್ ಅವರು ಮಹಾತ್ಮ ಗಾಂಧೀಜಿಯವರ ಚಿಂತನೆಯಿಂದ ಪ್ರಭಾವಿತರಾಗಿ ಸಮಾಜದಲ್ಲಿನ ಅಸ್ಪೃಶ್ಯತೆ ಮತ್ತು ಜಾತೀಯತೆಯಂತಹ ಅನಿಷ್ಠಗಳನ್ನು ಸಾಮರಸ್ಯದ ಮೂಲಕ ಬಗೆಹರಿಸಬಹುದು ಎಂದು ನಂಬಿದ್ದರು. ಮತ್ತೊಂದೆಡೆ, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಮಾನತೆ ಇಲ್ಲದ ಸಾಮರಸ್ಯ ಅರ್ಥಹೀನ ಎಂದು ಪ್ರತಿಪಾದಿಸಿದ್ದರು. ಇಬ್ಬರ ಮಾರ್ಗ ಭಿನ್ನವಾಗಿ ಕಂಡರೂ, ಸಮಾಜದಲ್ಲಿನ ಅನಿಷ್ಠಗಳನ್ನು ದೂರ ಮಾಡುವ ಗುರಿ ಒಂದೇ ಆಗಿತ್ತು ಎಂದು ರತ್ನಾಕರ್ ವಿವರಿಸಿದರು.

ಜಗಜೀವನ್ ರಾಮ್ ಅವರು ದೇಶದ ಬರಗಾಲದ ಸಂದರ್ಭದಲ್ಲಿ ಕೃಷಿ ಸಚಿವರಾಗಿ ಅಧಿಕಾರ ವಹಿಸಿಕೊಂಡು, ಆಹಾರಕ್ಕಾಗಿ ಇತರೆ ದೇಶಗಳತ್ತ ಕೈ ಚಾಚುತ್ತಿದ್ದ ಭಾರತವನ್ನು ಹಸಿರು ಕ್ರಾಂತಿಯ ಮೂಲಕ ಸ್ವಾವಲಂಬಿ ಭಾರತವನ್ನಾಗಿ ರೂಪಿಸಿ, ವಿದೇಶಗಳಿಗೆ ಆಹಾರ ರಫ್ತು ಮಾಡುವ ಹಂತಕ್ಕೆ ತಲುಪಿಸಿದ ಮಹಾನ್ ನಾಯಕರು. ಅವರ ಆಡಳಿತ ವೈಖರಿಯೇ ಅವರನ್ನು “ಹಸಿರು ಕ್ರಾಂತಿಯ ಹರಿಕಾರ” ಎಂಬ ಗೌರವಕ್ಕೆ ಪಾತ್ರರನ್ನಾಗಿಸಿದೆ ಎಂದು ಹೇಳಿದರು.

1971ರ ಯುದ್ಧದಲ್ಲಿ ಮಹತ್ವದ ಪಾತ್ರ
1971ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ ರಕ್ಷಣಾ ಸಚಿವರಾಗಿ ಜಗಜೀವನ್ ರಾಮ್ ವಹಿಸಿದ ಪಾತ್ರ ಸ್ಮರಣೀಯ. ಸೈನಿಕರೊಂದಿಗೆ ನಡೆಸಿದ ಮಾತುಕತೆಗಳು ಹಾಗೂ ತೀರ್ಮಾನಗಳು ದೇಶದ ಜಯಕ್ಕೆ ಬಲ ನೀಡಿದ್ದು, ಬಾಂಗ್ಲಾದೇಶ ವಿಮೋಚನೆಯಲ್ಲಿ ಅವರ ಪಾತ್ರ ಸ್ಲಾಘನೀಯ ಎಂದು ಹೇಳಿದರು.
1979ರ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗುವ ಸಂದರ್ಭದಲ್ಲಿ ಜಗಜೀವನ್ ರಾಮ್ ಅವರಿಗೆ ಪ್ರಧಾನ ಮಂತ್ರಿ ಹುದ್ದೆ ದೊರಕದೆ ಉಪ ಪ್ರಧಾನಿಯಾಗಿ ಮಾತ್ರ ಅವಕಾಶ ಸಿಕ್ಕದ್ದು, ಈ ದೇಶದಲ್ಲಿ ಜಾತಿ ಮನಸ್ಥಿತಿಯ ಕಹಿ ವಾಸ್ತವವನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಮಹನೀಯರ ದಿನಾಚರಣೆಗಳು ಅನುಸರಣೆಯಾಗಲಿ: ಶಾಸಕ ಸಿ.ಎನ್. ಬಾಲಕೃಷ್ಣ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಮಹನೀಯರ ದಿನಾಚರಣೆಗಳು ಕೇವಲ ಆಚರಣೆಗೆ ಸೀಮಿತವಾಗದೆ ಅನುಸರಣೆಯಾಗಬೇಕು. ಆಗ ಮಾತ್ರ ಅವುಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಜಗಜೀವನ್ ರಾಮ್ ಅವರು ಈ ದೇಶ ಕಂಡ ಅಪ್ರತಿಮ ರಾಜಕಾರಣಿ ಹಾಗೂ ನಾಯಕ. ಅವರು ಇಂದು ನಮ್ಮೊಂದಿಗಿಲ್ಲದಿದ್ದರೂ, ದೇಶಕ್ಕೆ ನೀಡಿದ ಅವರ ಕೊಡುಗೆಗಳು ಸದಾಕಾಲ ಸ್ಮರಣೀಯವಾಗಿವೆ. ಸ್ವತಂತ್ರ ಭಾರತ ಆರ್ಥಿಕವಾಗಿ ಸ್ವಾವಲಂಬಿಯಾಗಿ, ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಪೈಪೋಟಿ ನೀಡಲು ಇಂತಹ ಮಹನೀಯರ ಕೊಡುಗೆಗಳು ಕಾರಣವಾಗಿವೆ ಎಂದು ಹೇಳಿದರು.
ರಾಜ್ಯ ಸರ್ಕಾರ ಪ್ರಸ್ತುತ ಎಡಗೈ-ಬಲಗೈ ಎಂಬ ಗೊಂದಲಕ್ಕೆ ಕಾರಣವಾಗಿರುವ ಒಳಮೀಸಲಾತಿ ವಿಚಾರದಲ್ಲಿ ಎರಡು ಸಮುದಾಯಗಳ ಮುಖಂಡರೊಂದಿಗೆ ಸಮಗ್ರ ಚರ್ಚೆ ನಡೆಸಿ, ಆದಷ್ಟು ಬೇಗ ಗೊಂದಲಗಳನ್ನು ಪರಿಹರಿಸಿ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ, ತಾಲೂಕು ದಂಡಾಧಿಕಾರಿ ಜೆ.ಎಸ್. ಶಂಕರಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಆರ್. ಹರೀಶ್, ಡಿ.ವೈ.ಎಸ್.ಪಿ. ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ದೀಪಾ, ಟಿ.ಎ.ಪಿ.ಎಂ.ಸಿ ಅಧ್ಯಕ್ಷ ಮೆಡಿಕಲ್ ವೆಂಕಟೇಶ್, ಹೇಮಾವತಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ತೋಟಿ ಜಯರಾಮ್, ಕೆಡಿಪಿ ಸದಸ್ಯ ಕಬ್ಬಾಳು ಮಹೇಶ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ತ್ಯಾಗರಾಜ್, ಕಚೇರಿ ವ್ಯವಸ್ಥಾಪಕ ಮೋಹನ್, ಪುರಸಭೆ ಮುಖ್ಯಾಧಿಕಾರಿ ಯತೀಶ್, ದಲಿತ ಮುಖಂಡರಾದ ಬೆಳಗೀಹಳ್ಳಿ ಪುಟ್ಟಸ್ವಾಮಿ, ಆಲದಹಳ್ಳಿ ವೆಂಕಟೇಶ್, ಚಿಕ್ಕೋನಹಳ್ಳಿ ಧರ್ಮಯ್ಯ, ಮಾದಿಹಳ್ಳಿ ಮಂಜು ಸೇರಿದಂತೆ ಹಲವರು ಹಾಜರಿದ್ದರು.
– ಮಂಜುನಾಥ್ ಐ ಕೆ
