ಹಾಸನ, ಮಾ.2: ಮಾ.3 ಮಂಗಳವಾರ ಸಂಭವಿಸುವ ಕೇತುಗ್ರಸ್ತ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಬೇಲೂರು ಪಟ್ಟಣದಲ್ಲಿರುವ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದ ಗರ್ಭಗುಡಿ ಬಾಗಿಲು ಮುಚ್ಚಲಾಗುತ್ತಿದೆ ಎಂದು ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ಟ ತಿಳಿಸಿದ್ದಾರೆ.
ಮಾ.3ರಂದು ಬೆಳಿಗ್ಗೆ 9 ಗಂಟೆಯೊಳಗೆ ಪೂಜೆ ಸಲ್ಲಿಸಿ, ನಂತರ ಗರ್ಭಗುಡಿ ಬಂದ್ ಮಾಡಲಾಗುವುದು. ಗ್ರಹಣ ಮುಗಿದ ಬಳಿಕ ರಾತ್ರಿ 7 ಗಂಟೆ ನಂತರ ತಿಥಿ ಪುಣ್ಯಃ, ಆಲಯ ಅರ್ಚನೆ, ಅಭಿಷೇಕ ಹಾಗೂ ಸಂಪ್ರೋಕ್ಷಣೆ ನೆರವೇರಿಸಿ ಮಹಾನೈವೇದ್ಯ ಸಮರ್ಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಗ್ರಹಣದ ದಿನ ಗರ್ಭಗುಡಿ ಮಾತ್ರ ಬಂದ್ ಆಗಲಿದ್ದು, ದೇವಾಲಯದ ಪ್ರಾಂಗಣವನ್ನು ಪ್ರವಾಸಿಗರು ವೀಕ್ಷಿಸಬಹುದಾಗಿದೆ. ಮಾ.4ರಂದು ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
ಗ್ರಹಣದ ಪೂಜೆ ಸಲ್ಲಿಸಲು ಇಚ್ಛಿಸುವವರು ಹುರುಳಿ ಹಾಗೂ ಅಕ್ಕಿ ದಾನ ನೀಡಿ ಸಮರ್ಪಣೆ ಮಾಡಿದರೆ ನಿಮಿತ್ತ ಶಾಂತಿ ನೆರವೇರುತ್ತದೆ ಎಂದು ಪ್ರಧಾನ ಅರ್ಚಕರು ತಿಳಿಸಿದ್ದಾರೆ. ಭಕ್ತಾಧಿಗಳು ದೇವಾಲಯ ಆಡಳಿತಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
