ಚನ್ನರಾಯಪಟ್ಟಣ: ಶಾಂತವಾಗಿದ್ದ ಬಾಗೂರು ಗ್ರಾಮದ ಹೃದಯ ಭಾಗದಲ್ಲಿ ಇಂದು ಹಾಡಹಗಲೇ ರಕ್ತದ ಓಕುಳಿ ಹರಿದಿದೆ. ದೇಶ ಕಾಯುವ ಕೆಲಸದಲ್ಲಿದ್ದ ಮಾಜಿ ಸೈನಿಕ ವೆಂಕಟೇಶ್ ಎಂಬಾತ ತನ್ನ ಅಟ್ಟಹಾಸ ಮೆರೆದಿದ್ದು, ಗ್ರಾಮದ ಅಮಾಯಕ ಕುಟುಂಬವೊಂದರ ಮೇಲೆ ಅಮಾನವೀಯವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ಕ್ರೌರ್ಯದ ಪರಮಾವಧಿ:
ಗ್ರಾಮದ ನಿವಾಸಿಗಳಾದ ಶ್ರೀಶೇಖರ್, ಅವರ ಪತ್ನಿ ಪ್ರೇಮಕುಮಾರಿ ಹಾಗೂ ಅವರ ಪುತ್ರ ವೆಂಕಟೇಶ್ ಎಂಬುವವರ ಮೇಲೆ ಈ ಪಾಪಿ ವೆಂಕಟೇಶ್ ಕಿರಾತಕನಂತೆ ಎರಗಿದ್ದಾನೆ. ಹಲ್ಲೆಯ ತೀವ್ರತೆ ಎಷ್ಟಿತ್ತೆಂದರೆ, ಇಡೀ ರಸ್ತೆಯೇ ರಕ್ತಮಯವಾಗಿದ್ದು, ಗಾಯಾಳುಗಳು ಪ್ರಾಣ ಉಳಿಸಿಕೊಳ್ಳಲು ಒದ್ದಾಡುವ ದೃಶ್ಯ ಎದೆ ನಡುಗಿಸುವಂತಿತ್ತು. ಮಾಜಿ ಸೈನಿಕನ ಈ ರಕ್ಕಸ ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾವು ಬದುಕಿನ ನಡುವೆ ಹೋರಾಟ:
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೂವರನ್ನು ಸ್ಥಳೀಯ ಗೆಳೆಯರು ಹಾಗೂ ಸಾರ್ವಜನಿಕರು ತಕ್ಷಣವೇ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸದ್ಯ ಅವರು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಸಾರ್ವಜನಿಕರ ಆಕ್ರೋಶ – ಬಿಗುವಿನ ವಾತಾವರಣ:
ದೇಶ ಸೇವೆ ಮಾಡಬೇಕಾದ ಕೈಗಳು ಹೀಗೆ ಅಮಾಯಕರ ರಕ್ತ ಹರಿಸಿದ್ದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ. “ಇಂತಹ ಕ್ರೂರಿಗಳಿಗೆ ಕಾನೂನಿನ ಭಯವೇ ಇಲ್ಲವೇ?” ಎಂದು ಬಾಗೂರಿನ ಜನತೆ ಆಕ್ರೋಶ ಹೊರಹಾಕುತ್ತಿದ್ದಾರೆ. ಕೂಡಲೇ ಈ ನರಹಂತಕನನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಪೊಲೀಸ್ ತನಿಖೆ:
ಘಟನೆಗೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹಂತ-ಹಂತವಾಗಿ ತನಿಖೆ ಕೈಗೊಂಡಿದ್ದು, ಆರೋಪಿಯ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
-ಮಂಜುನಾಥ್ ಐ.ಕೆ
