ಬೆಂಗಳೂರು : ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಸದಾ ಶ್ರಮಿಸುತ್ತಿರುವ ಕನ್ನಡ ಕೆಲಸವನ್ನು ತನ್ನ ಮೈಮೇಲೆ ಎಳೆದುಕೊಂಡು ಓಡಾಡುವ, ಸುಗಮವಾಗಿ ಸಾಹಿತ್ಯ ಪರಿಚಾರಿಕೆ ಮಾಡುತ್ತಿರುವ ಕನ್ನಡ ಮೇಷ್ಟ್ರು ಡಾ.ಸಿಸಿರಾ ಅಂತಹವರ ಪ್ರಾಮಾಣಿಕ ಮನಸ್ಸುಗಳು ಇವತ್ತಿಗೆ ಬೇಕಾಗಿದೆ ಎಂದು ಹಿರಿಯ ವಿದ್ವಾಂಸ ನಾಡೋಜ ಪ್ರೊ.ಹಂಪನಾ ಮುಕ್ತ ಕಂಠದಿಂದ ಶ್ಲಾಘಿಸಿದರು.
ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಡಾ.ಸಿಸಿರಾ ಸ್ನೇಹ ಬಳಗ, ಸಾಹಿತ್ಯ ಸರಸ್ವತಿ ಕಲಾ ವೇದಿಕೆ ಮತ್ತು ಸ್ನೇಹ ಕೂಟ ಸಾಂಸ್ಕೃತಿಕ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡ ಜನರ ಪ್ರೀತಿ ವಿಶ್ವಾಸ ನಂಬಿಕೆ ಪಡೆದುಕೊಳ್ಳುವುದು ಸಾಮಾನ್ಯವಾದ ಕೆಲಸವಲ್ಲ. ಶಿಶಿರ ಋತುವಿನ ಹಾಗೆ ಸದ್ಧಿಲ್ಲದೆ ತಂಪಾದ ವಾತಾವರಣದಂತೆ ಸಿಸಿರಾ ಕಾವ್ಯನಾಮದಿಂದ ಕನ್ನಡಿಗರ ಮನಸ್ಸಿನಲ್ಲಿ ತನ್ನ ಕೆಲಸದ ಮೂಲಕ ಕರ್ನಾಟಕದಾದ್ಯಂತ ವಿಶೇಷವಾಗಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಕನ್ನಡ ಪ್ರದೇಶವನ್ನು ಮಕ್ಕಳಿಗೆ ಕನ್ನಡ ಕಲಿಸುವುದು, ಕಾವ್ಯ, ಕತೆ, ಬರವಣಿಗೆ ಕಾರ್ಯಾಗಾರ ಏರ್ಪಡಿ ಸಾವಿರಾರು ಯುವ ಮನಸ್ಸುಗಳನ್ನು ಕನ್ನಡದ ಕಡೆಗೆ, ಸಾಂಸ್ಕೃತಿಕ ಸಾಹಿತ್ಯ , ಶೈಕ್ಷಣಿಕ, ಸಾಮಾಜಿಕ ವಾತಾವರಣ ಸೃಷ್ಟಿ ಮಾಡುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ ಎಂದರೆ. ಸಿಸಿರಾಗೆ ಮಹಾವೀರ ಜಯಂತಿ ಅಂಗವಾಗಿ ಆಯಸ್ಸು, ಆರೋಗ್ಯ ಸದಾ ವೃದ್ದಿಸಲಿ, ಕನ್ನಡಮ್ಮನ ಸೇವೆ ಇನ್ನೂ ಹೆಚ್ಚಲಿ ಎಂದು ಹಾರೈಸಿದರು.

ಕರ್ನಾಟಕ ಗಾಂಧಿ ಭವನದ ಅಧ್ಯಕ್ಷರಾದ ನಾಡೋಜ ಡಾ.ವೂಡೇ ಪಿ ಕೃಷ್ಣ ಅವರು ಕುಂಚ ಕಲಾವಿದೆ ಶಾಂತಿ ವಾಸು ಅವರ ಕಥಾಸಂಕಲನ ‘ಅಂತ:ಪುರ ದರ್ಪಣ ‘ ಕೃತಿ ಲೋಕಾರ್ಪಣೆ ಮಾಡಿ ಸಿಸಿರಾ ಅವರು ತಮ್ಮ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಲೇಖಕಿ ಶಾಂತಿ ವಾಸು ಅವರ ಕಥಾಸಂಕಲನ ಲೋಕಾರ್ಪಣೆ ಮಾಡಿಸಿ ತನಗಿಂತ ಇನ್ನೊಬ್ಬ ಲೇಖಕರ ಬೆಳೆವಣಿಗೆಯನ್ನು ಹೇಗೆ ಇಷ್ಟಪಡುತ್ತಾರೆ, ಬೇರೆಯವರನ್ನು ಹೇಗೆ ಬೆಳೆಸುತ್ತಾ ಖುಷಿ ಪಡುವರು ಎಂಬುದು ಇದರಿಂದಲೇ ಗೊತ್ತಾಗುತ್ತದೆ. ಹೀಗಾಗಿ ಶಾಂತಿ ವಾಸು ಅವರ ಇಲ್ಲಿನ ಹದಿನೈದು ಕಥೆಗಳು ಗ್ರಾಮೀಣ ಬದುಕಿನ ಹಿಂದಿನ ಘಟನಾವಳಿಗಳನ್ನು, ಕೌಟುಂಬಿಕ ಸಾಮರಸ್ಯ, ಅವಿಭಕ್ತ ಕುಟುಂಬಗಳ ಅವಶ್ಯಕತೆಯನ್ನು ಮೆಲುಕು ಹಾಕುವಂತೆ ಮಾಡುತ್ತವೆ ಎಂದು ಲೇಖಕಿಗೆ ಶುಭ ಕೋರಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ ವೆಂಕಟೇಶ್ ಅವರು ಸಿಸಿರಾ ಅವರು ಒಬ್ಬ ವ್ಯಕ್ತಿಯಾಗಿ ನಮಗೆ ಕಾಣಿಸುವುದಿಲ್ಲ, ಅವರಲ್ಲಿ ಕನ್ನಡ ಧೀ ಶಕ್ತಿ ಸಂಘಟನಾ, ಚಾತುರ್ಯ, ಅಘಾತ ಶ್ರಮ ಇದೆ.

ತಮ್ಮ ತನು ಮನ ಧನವನ್ನು ವ್ಯಯ ಮಾಡಿ ಪರಾರ ಹಿತವನ್ನು ತನ್ನ ಹಿತವೆಂದು ಭಾವಿಸಿದವರು.ವಿದ್ಯೆ ವಿದ್ವತ್ ಎಲ್ಲರಲ್ಲೂ ಇರುವುದು ಅಪರೂಪ ಸಿಸಿರಾ ಅವರಲ್ಲಿ ತಾನು ಸಮಾಜದ ಯುವಜನರನ್ನು ಸನ್ಮಾರ್ಗದೆಡೆಗೆ ಕರೆದೊಯ್ಯುವ ಸಾಹಸ ಮಾಡುತ್ತಿದ್ದಾರೆ. ಅವರ ಶ್ರಮಕ್ಕೆ ಸರ್ಕಾರದ ಅಕಾಡೆಮಿ, ಸಂಘಸಂಸ್ಥೆಗಳಲ್ಲಿ ಸೇವೆಗೆ ಅವಕಾಶ ಸಿಗಬೇಕು, ಸಿಕ್ಕರೆ ಆ ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಸಿಸಿರಾ ಮತ್ತು ಲೇಖಕಿ ಶಾಂತಿ ವಾಸು ಅವರುಗಳನ್ನು ಅಭಿನಂದಿಸಲಾಯಿತು. ಸಿಸಿರಾ ಸಾಹಿತ್ಯ ಪ್ರಶಸ್ತಿ ತುಮಕೂರು ಜಿಲ್ಲೆಯ ಸಿದ್ದೇಶ್ ದುಗ್ಗೇನಹಳ್ಳಿ , ಸಾಂಸ್ಕೃತಿಕ ಪ್ರಸಾರ ಪ್ರಶಸ್ತಿಯನ್ನು ಬಾಗಲಕೋಟೆ ಜಿಲ್ಲೆಯ ರಮೇಶ್ ಎಂ ಕಮತಗಿ ಅವರಿಗೆ ಪ್ರಧಾನ ಮಾಡಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ.ಬೈರಮಂಗಲ ರಾಮೇಗೌಡ (ಸಾಹಿತ್ಯ), ಡಾ.ದಾಕ್ಷಾಯಿಣಿ ಎನ್ ಎಸ್ ಎಸ್), ಡಾ.ಮುರಳಿ ಮೋಹನ್ (ಪಿಹೆಚ್. ಡಿ ಪದವಿ), ಶಶಿಧರ ಹಾಲಾಡಿ ( ಪತ್ರಿಕೋದ್ಯಮ), ಬಿ.ಆರ್.ಸಿದ್ಧರಾಜು (ಕನ್ನಡ ಸೇವೆ), ಪ್ರಭಾಕರ ಗಂಗೊಳ್ಳಿ (ಕವಿ ಮತ್ತು ಕನ್ನಡ ಸೇವೆ) ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಲೇಖಕಿ ಶಾಂತಿ ವಾಸು, ಪ್ರಾಧ್ಯಾಪಕ ಡಾ.ಆರ್.ವಾದಿರಾಜ್, ಸಾಹಿತಿ ಕೆ.ಎಂ.ರೇವಣ್ಣ, ಸ್ನೇಹ ಬಳಗದ ಕೃಷ್ಣ ಹಾನ್ ಬಾಳ್, ಸಿ.ಹೇಮಾವತಿ ಇದ್ದರು. ಮಧ್ಯಾಹ್ನದ ಗೋಷ್ಠಿಯಲ್ಲಿ ಸಿಸಿರಾ ಅವರ ಸಾಹಿತ್ಯ, ಸಂಸ್ಕೃತಿ, ಶೈಕ್ಷಣಿಕ, ಸಾಮಾಜಿಕ ಸೇವೆಯ ವಿವಿಧ ಆಯಾಮಗಳನ್ನು ಕುರಿತು ಸಾಹಿತಿಗಳಾದ ಎಂ.ವಿ.ನೆಗಳೂರು, ನೀಲಾವರ ಸುರೇಂದ್ರ ಅಡಿಗ, ಸಾ.ಮ.ಶಿವಮಲ್ಲಯ್ಯ, ಉದಯರವಿ , ಹಾ.ವೀ. ಮಂಜುಳಾ ಶಿವಾನಂದ ಮುಂತಾದವರು ಮಾತನಾಡಿದರು.
