ಬೆಂಗಳೂರು: ಆನ್ಲೈನ್ ಕಾನೂನು ನೆರವಿನ ಹೆಸರಿನಲ್ಲಿ ನಕಲಿ ಸಂಸ್ಥೆಯೊಂದನ್ನು ಸ್ಥಾಪಿಸಿ, ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಗ್ಯಾಂಗ್ನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಪತ್ತೆಹಚ್ಚಿ ತನಿಖೆ ಮುಂದುವರೆಸಿದ್ದಾರೆ.
ರಾಮಮೂರ್ತಿ ನಗರ ನಿವಾಸಿಯೊಬ್ಬರಿಗೆ ಸೋಲಾರ್ ಪ್ಲಾಂಟ್ ಅಳವಡಿಸುವ ನೆಪದಲ್ಲಿ ಒಂದೂವರೆ ಕೋಟಿ ರೂ. ವಂಚನೆ ಮಾಡಲಾಗಿದ್ದು, ಅವರು ಕಾನೂನು ನೆರವಿಗಾಗಿ Quickmoto Legal Services ಎಂಬ ನಕಲಿ ವೆಬ್ಸೈಟ್ ಸಂಪರ್ಕಿಸಿದ್ದರಿಂದ ಮತ್ತೊಮ್ಮೆ ವಂಚನೆಗೆ ಒಳಗಾಗಿದ್ದಾರೆ. ಹಂತ ಹಂತವಾಗಿ ₹12.5 ಲಕ್ಷ ಹಣ ಪಡೆದುಕೊಳ್ಳಲಾಗಿತ್ತು.
Zoiper-5 ಎಂಬ VoIP ಆಧಾರಿತ ಅಪ್ಲಿಕೇಶನ್ ಬಳಸಿ ಈ ಜಾಲ ಕಾರ್ಯನಿರ್ವಹಿಸುತ್ತಿದ್ದು, ತೋಫುಲ್ ಮಹಮ್ಮದ್ ಎಂಬ ವ್ಯಕ್ತಿ ಪ್ರಮುಖ ಆರೋಪಿಯಾಗಿ ಬಂಧಿತನಾಗಿದ್ದಾನೆ. ಅವರು ಕಸ್ತೂರಿ ನಗರದಲ್ಲಿ India Legal Services ಹೆಸರಿನಲ್ಲಿ ಕಚೇರಿ ತೆರೆಯಲಾಗಿದ್ದು, ಹನ್ನೆರಡು ಟೆಲಿಕಾಲರ್ಗಳನ್ನು ನೇಮಿಸಿ ವಂಚನೆ ನಡೆಸಲಾಗುತ್ತಿತ್ತು.
ತೋಫುಲ್ನ ಸಹೋದರ ದುಬೈನಲ್ಲಿ ನಕಲಿ ಕಂಪನಿ ತೆರೆದು ಅಲ್ಲಿ ಸಹ ಸೈಬರ್ ವಂಚನೆ ನಡೆಸುತ್ತಿದ್ದ ಎನ್ನಲಾಗಿದೆ. ಸಿಸಿಬಿ ಪೊಲೀಸರು ತನಿಖೆ ಮುಂದುವರೆಸುತ್ತಿದ್ದಾರೆ.
