ಹಾಸನ: ಎಫ್.ಡಿ. ಹಾಗೂ ಲೋನ್ ಮಾಡಿಸುತ್ತೇನೆಂದು ನಂಬಿಸಿ ಸುಮಾರು 40ರಿಂದ 50 ಗ್ರಾಹಕರಿಂದ ಕೋಟ್ಯಾಂತರ ರೂಪಾಯಿ ಹಣ ವಸೂಲಿ ಮಾಡಿ ಮೋಸ ಮಾಡಿರುವ ಆರೋಪ ಬ್ಯಾಂಕ್ ಮ್ಯಾನೇಜರ್ ವಿರುದ್ಧ ಕೇಳಿಬಂದಿದೆ.
ನಗರದ ವಿಜಯನಗರದಲ್ಲಿರುವ ಸೂರ್ಯೋದಯ ಬ್ಯಾಂಕ್ನ ಮ್ಯಾನೇಜರ್ ಪೂಜಾ ಎಚ್.ಎಸ್. ವಿರುದ್ಧ ಗ್ರಾಹಕರು ಗಂಭೀರ ಆರೋಪ ಮಾಡಿದ್ದಾರೆ. ಸುಮಾರು ಮೂರು ಕೋಟಿಗೂ ಹೆಚ್ಚು ಹಣವನ್ನು ವಿವಿಧ ಗ್ರಾಹಕರಿಂದ ಸಂಗ್ರಹಿಸಿ ವಂಚನೆ ನಡೆಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೋಸಕ್ಕೆ ಒಳಗಾದ ಗ್ರಾಹಕರ ಪ್ರಕಾರ, ಎಫ್.ಡಿ. ಹಾಗೂ ಸಾಲ ಸೌಲಭ್ಯಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿ ಹಣ ಪಡೆದಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಪೂಜಾ ಎಚ್.ಎಸ್. ದುಬೈಗೆ ತೆರಳಲು ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಏರ್ಪೋರ್ಟ್ನಲ್ಲಿದ್ದಾರೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ಆರೋಪಿತರು ದೇಶ ತೊರೆಯದಂತೆ ಪಾಸ್ಪೋರ್ಟ್ ರದ್ದುಗೊಳಿಸಿ ತಕ್ಷಣ ಬಂಧಿಸುವಂತೆ ಹಾಗೂ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ. ಈ ಸಂಬಂಧ ಸುಮಾರು ಹದಿನೈದಕ್ಕೂ ಹೆಚ್ಚು ಗ್ರಾಹಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಘಟನೆ ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ದೂರಿನ ಪರಿಶೀಲನೆ ನಡೆಸುತ್ತಿದ್ದಾರೆ.
