ಹಾಸನ: ಮೈಸೂರು ದಸರಾ ಉದ್ಘಾಟನೆಗೆ ಸಾಹಿತಿ ಬಾನುಮುಷ್ತಾಕ್ ಅವರನ್ನು ಆಹ್ವಾನಿಸಿರುವುದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ, ಕಂದಾಯ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಇವತ್ತು ಕೆಲವರಿಗೆ ಏನಾಗಿದೆ ಅಂದರೆ ಭಾವನೆಗಳ ಜೊತೆ ಆಟವಾಡಿ, ಸಮಾಜವನ್ನು ಒಡೆದು, ರಾಜಕೀಯ ಬೇಳೆ ಬೇಯಿಸಿಕೊಳ್ಳುವುದೇ ಉದ್ಯೋಗ ಆಗಿಬಿಟ್ಟಿದೆ. ಜನರನ್ನು ಕೂಡುವ ಬದಲು ಒಡೆಯುವುದೇ ಇವರ ಧ್ಯೇಯವಾಗಿದೆ” ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.
ಬಾನುಮುಷ್ತಾಕ್ ಅವರ ಸಾಧನೆಗಳನ್ನು ಹೊಗಳಿದ ಕೃಷ್ಣಭೈರೇಗೌಡ ಅವರು, “ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯಕ್ಕೆ ಕೀರ್ತಿ ತಂದಿದ್ದಾರೆ. ನೊಬೆಲ್ ಮಟ್ಟದ ಜಾಗತಿಕ ಪ್ರಶಸ್ತಿ ಸಿಕ್ಕಿರದಿದ್ದರೂ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡಿಗರ ಅಸ್ಮಿತೆ, ಸ್ವಾಭಿಮಾನ, ಗೌರವದ ಸಂಕೇತವಾಗಿದ್ದಾರೆ. ಹಾಸನದಲ್ಲಿ ಜನಪರ ಹೋರಾಟ, ರೈತರ ಪರ ಹೋರಾಟ, ಶೋಷಿತ ಮಹಿಳೆಯರ ಪರ ಹೋರಾಟ ಮಾಡಿದ್ದಾರೆ” ಎಂದು ನೆನಪಿಸಿದರು.
ವಿರೋಧ ವ್ಯಕ್ತಪಡಿಸುತ್ತಿರುವವರ ಮನೋಭಾವವನ್ನು ಪ್ರಶ್ನಿಸಿದ ಸಚಿವರು, “ಅದನ್ನು ಜಾತಿ, ಧರ್ಮದ ಹೆಸರಿನಲ್ಲಿ ನೋಡಬೇಡಿ. ಅವರು ಯಾವ ಜಾತಿ, ಧರ್ಮಕ್ಕೆ ಸೇರಿದವರಲ್ಲ, ಕನ್ನಡಿಗರ ಹೆಮ್ಮೆ. ಅದರ ಹೆಸರಿನಲ್ಲಿ ಸಮಾಜ ಒಡೆಯುವುದು ನಿಜವಾಗಿ ಒಳ್ಳೆಯ ಉದ್ದೇಶ ಇರುವವರು ಮಾಡುವ ಕೆಲಸವಲ್ಲ” ಎಂದು ಎಚ್ಚರಿಕೆ ನೀಡಿದರು.
ಟೀಕಾಕಾರರನ್ನು ಉದ್ದೇಶಿಸಿ ಅವರು, “ಮೊಸರಿನಲ್ಲಿ ಕಲ್ಲು ಹುಡುಕಲು ಹೋದರೆ ಎಲ್ಲದರಲ್ಲೂ ಕಲ್ಲು ಸಿಗುತ್ತದೆ. ಸಲಹೆ ಕೊಡಿ, ಟೀಕೆ ಮಾಡಿ — ಅದರಲ್ಲಿ ತೊಂದರೆಯಿಲ್ಲ. ಆದರೆ ಕೆಲವರಿಗೆ ಟೀಕೆ ಮಾಡುವುದೇ ಉದ್ಯೋಗವಾಗಿದೆ. ಸಮಾಜ ಒಡೆದು ಎಲ್ಲಿಗೆ ಕರೆದೊಯ್ಯಲು ಯತ್ನಿಸುತ್ತೀರಾ? ಕೊನೆಗೆ ಮನೆಯನ್ನೇ ಒಡೆಯುತ್ತೀರಾ? ನಾವು ಕೂಡಿ ಬದುಕಬೇಕಾ, ಹೊಡೆದಾಡಿಕೊಂಡು ಕಾಲ ಕಳೆಯಬೇಕಾ?” ಎಂದು ಪ್ರಶ್ನಿಸಿದರು.
