ಬೆಂಗಳೂರು, ಜುಲೈ 09: ಎಸ್ಎಸ್ಎಲ್ಸಿ (SSLC) ಪರೀಕ್ಷೆಯ ಪ್ರಥಮ ಭಾಷಾ ವಿಷಯಗಳಲ್ಲಿ ಅಂಕಗಳನ್ನು 125ರಿಂದ 100ಕ್ಕೆ ಇಳಿಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಮುಂದಾಗಿರುವ ನಿರ್ಧಾರವು ಇದೀಗ ತೀವ್ರ ವಿರೋಧಕ್ಕೆ ಗುರಿಯಾಗಿದೆ. ಈ ಕ್ರಮಕ್ಕೆ ಖ್ಯಾತ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಕಠಿಣ ವಿರೋಧ ವ್ಯಕ್ತಪಡಿಸಿದ್ದು, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಅವರು ಈ ನಿರ್ಧಾರವನ್ನು “ಕನ್ನಡಪರ ಚಳವಳಿಯ ಅವಮಾನ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಗೋಕಾಕ್ ಚಳವಳಿಯ ಫಲವಾಗಿ ಕನ್ನಡ ಸೇರಿ ಪ್ರಥಮ ಭಾಷೆಗಳಿಗೆ 125 ಅಂಕಗಳನ್ನು ನೀಡಲು ನಿರ್ಧಾರ ಕೈಗೊಳ್ಳಲಾಗಿತ್ತು. ಇದನ್ನು ಈಗ ಮತ್ತೆ 100ಕ್ಕೆ ಇಳಿಸುವುದು ಕನ್ನಡದ ಮಹತ್ವವನ್ನು ತಗ್ಗಿಸುವ ಕಾರ್ಯ” ಎಂದು ತಿಳಿಸಿದ್ದಾರೆ.
ಪತ್ರದ ಮುಖ್ಯ ಅಂಶಗಳು:
-
ಗೋಕಾಕ್ ಚಳವಳಿಯ ಹಿನ್ನಲೆಯಲ್ಲಿ 125 ಅಂಕಗಳು ಪ್ರಥಮ ಭಾಷೆಗೆ ನೀಡುವ ನಿರ್ಧಾರ ರೂಪಿಸಲಾಯಿತು.
-
ಮೂವರು ಭಾಷೆಗಳಿಗೆ ತಲಾ 100 ಅಂಕ ಸೂತ್ರದ ವಿರುದ್ಧ ತೀವ್ರ ವಿರೋಧ ವ್ಯಕ್ತವಾಗಿತ್ತು.
-
ಅಂತಿಮವಾಗಿ ಸರ್ವ ಸಮ್ಮತ ತೀರ್ಮಾನವಾಗಿ 125 ಅಂಕಗಳ ಪದ್ದತಿ ಅಳವಡಿಸಲಾಯಿತು.
-
ಈಗ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದು ತರ್ಕಶೂನ್ಯ ಹಾಗೂ ತತ್ವವಿರೋಧಿ.
-
ಇದು ಕನ್ನಡ ವಿರೋಧಿ ಧೋರಣೆಯಾಗಿ ಪರಿಗಣಿಸಬೇಕು.
ಡಾ. ರಾಮಚಂದ್ರಪ್ಪ ಅವರು ಸರ್ಕಾರದ ಈ ನಿರ್ಧಾರವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ. ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಹಲವು ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಗಣ್ಯರೂ ಸಹ ಈ ನಿರ್ಧಾರವನ್ನು ಖಂಡಿಸುತ್ತಿದ್ದಾರೆ.

[…] […]