ಬೆಂಗಳೂರು: ಮಳೆಗಾಲ ಬಂದಾಗ ಮುನ್ನೆಚ್ಚರಿಕೆ ಇರಬೇಕು. ಬಿಬಿಎಂಪಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ತಗ್ಗು ಪ್ರದೇಶಗಳಲ್ಲಿ ಕಾಮಗಾರಿ ಹಮ್ಮಿಕೊಂಡರೆ ಏನಾಗುತ್ತದೆ ಎಂದು ಸಚಿವ ಜಿ. ಪರಮೇಶ್ವರ್ ಅಸಮಾಧಾನ ಹೊರಹಾಕಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಬೆಂಗಳೂರು ಮಳೆ ಅವಾಂತರದ ಬಗ್ಗೆ ಪ್ರತಿಕ್ರಿಯಿಸುತ್ತಾ, “ಮೇ ಜೂನ್ ಮಳೆಗಾಲ. ತಗ್ಗು ಪ್ರದೇಶಗಳಲ್ಲಿ ಕಾಮಗಾರಿ ಹಮ್ಮಿಕೊಂಡರೆ ಏನಾಗುತ್ತದೆ?. ಇದರ ಅನುಭವ ಅಧಿಕಾರಿಗಳಿಗೆ ಇರಬೇಕು. ಬಿಬಿಎಂಪಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು. ವೈಟ್ ಟಾಪಿಂಗ್, ಕೇಬಲ್ ವೈರ್ ಕಾಮಗಾರಿ ನಡೆಯುತ್ತಿದೆ. ಮಳೆಗಾಲ ಹತ್ತಿರ ಬರುತ್ತಿದೆ. ಹೀಗಾಗಿ ಜಾಗ್ರತೆ ವಹಿಸಬೇಕಿತ್ತು” ಎಂದು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
“ಮಳೆಯಿಂದ ತುಂಬಾ ತೊಂದರೆಯಾಗಿದೆ. ಸಿಲ್ಕ್ ಬೋರ್ಡ್ನಲ್ಲಿ ನೀರು ನುಗ್ಗಿದೆ. ಬೇರೆ ಕಡೆಗಳಲ್ಲೂ ನೀರು ನುಗ್ಗಿದೆ. ಇದರಿಂದ ಟ್ರಾಫಿಕ್ಗೆ ತೊಂದರೆ ಅಂತಿದ್ದಾರೆ. ಡಿಸಿಎಂ ಡಿಕೆಶಿ ಹೊಸಪೇಟೆಯಲ್ಲಿದ್ದಾರೆ. ಅವರು ಸೂಚನೆ ಕೊಟ್ಟಿದ್ದಾರೆ ಅಂತ ಕೇಳಿದ್ದೇನೆ. ವಲಯವಾರು ಜಂಟಿ ಆಯುಕ್ತರು ಇರುತ್ತಾರೆ. ಅವರು ಕ್ರಮ ವಹಿಸುತ್ತಾರೆ” ಎಂದು ತಿಳಿಸಿದರು.
ತುಮಕೂರಿಗೆ ಮೆಟ್ರೋ ಬಂದರೆ ಟ್ರಾಫಿಕ್ ಕಡಿಮೆ ಆಗಲಿದೆ: ತುಮಕೂರು ಮೆಟ್ರೋಗೆ ತೇಜಸ್ವಿ ವಿರೋಧ ವಿಚಾರವಾಗಿ ಮಾತನಾಡುತ್ತಾ, ಹತ್ತು ವರ್ಷದ ಹಿಂದೆ ಮೆಟ್ರೋ ಕೇಳಿದ್ದೆ. ನಾನು ತುಮಕೂರಿಗೆ ಮೆಟ್ರೋ ಬೇಕು ಅಂದಿದ್ದೆ. ತುಮಕೂರಿಗೆ ಮೆಟ್ರೋ ಬಂದ್ರೆ ಟ್ರಾಫಿಕ್ ಕಡಿಮೆ ಆಗಲಿದೆ. ಬೆಂಗಳೂರು ಟ್ರಾಫಿಕ್ ಒತ್ತಡ ಕಡಿಮೆ ಆಗುತ್ತದೆ. ಕಳೆದ ಬಾರಿ ಸಿಎಂ ಮನವೊಲಿಸಿದ್ದೆ. ಬಜೆಟ್ನಲ್ಲಿ ಪ್ರಕಟ ಮಾಡಿಸಿದ್ದೇವೆ. ಹೈದ್ರಾಬಾದ್ ಕಂಪನಿ ಡಿಪಿಆರ್ ಕೊಟ್ಟಿದೆ. ಸಾಧಕ ಬಾಧಕ ನೋಡಿಯೇ ವರದಿ ನೀಡಲಾಗಿದೆ ಎಂದರು.
“ಬೆಂಗಳೂರಿನ ಇಬ್ಬರು ಸಂಸದರಿಗೆ ಇದು ಗೊತ್ತಿಲ್ಲ. ಸ್ಟುಪಿಡ್ ಗಿಪಿಡ್ ಅಂತ ಏನೇನೋ ಹೇಳಿದ್ದಾರೆ. ತುಮಕೂರಿನಲ್ಲಿ ಇಂಡಸ್ಟ್ರಿಯಲ್ ಹಬ್ ಮಾಡಿದ್ದೇವೆ. ದಿನನಿತ್ಯ ಸಾವಿರಾರು ಜನ ಪ್ರಯಾಣ ಮಾಡ್ತಾರೆ.ತುಮಕೂರು ಬೆಂಗಳೂರು ನಡುವೆ ಪ್ರಯಾಣ ಮಾಡುತ್ತಾರೆ. ತುಮಕೂರು – ಬೆಂಗಳೂರು ರಸ್ತೆ ಟ್ರಾಫಿಕ್ ಹೆಚ್ಚಾಗ್ತಿದೆ. ನಾವೇ ಓಡಾಡೋಕೆ ಎರಡು ಮೂರು ಗಂಟೆ ಬೇಕು. ಸಂಸದರು ಅಂತಾರಾಷ್ಟ್ರೀಯ ವಿಚಾರ ತಿಳಿದಿದ್ದಾರೆ. ಟರ್ಕಿ, ಟೊಕಿಯೋದಲ್ಲಿ ಮೆಟ್ರೋ ಸಂಪರ್ಕವಿದೆ. ಒಂದು ಸಿಟಿಯಿಂದ ಮತ್ತೊಂದು ಸಿಟಿಗೆ ಸಂಪರ್ಕ ಕಲ್ಪಿಸಲು ಮೆಟ್ರೋ ಇದೆ. ಹೀಗಾಗಿ ನಾವು ಮೆಟ್ರೋನ ತಮಾಷೆಗೆ ಮಾಡಿದ್ದಲ್ಲ. ಅರ್ಥ ಮಾಡಿಕೊಂಡು ಹೇಳಿಕೆ ಕೊಡಬೇಕು” ಎಂದರು.
ನೆಲಮಂಗಲದಲ್ಲಿ ಏರ್ಪೋರ್ಟ್ ಆದರೆ ಹೆಚ್ಚು ಅನುಕೂಲ: ವಿ.ಸೋಮಣ್ಣ ಬೆಂಗಳೂರಿನಲ್ಲಿದ್ದವರೆ, ಅವರಿಗೆ ಚೆನ್ನಾಗಿ ಅರ್ಥ ಆಗಿದೆ. ನಾವು ತುಮಕೂರಿನವರಾಗಿ ನಮಗೆ ಮೆಟ್ರೋ ಬೇಕೇಬೇಕು. ಅಭಿವೃದ್ಧಿ ದೃಷ್ಟಿಯಿಂದ ಮೆಟ್ರೋ ಬೇಕು. ದುರುದ್ದೇಶದಿಂದ ನಮಗೆ ಅಲ್ಲ. ಒಂದು ವೇಳೆ ನೆಲಮಂಗಲದಲ್ಲಿ ಏರ್ಪೋರ್ಟ್ ಆದರೆ. ಹೆಚ್ಚು ಅನುಕೂಲ ಆಗುತ್ತದೆ. ಪಿಪಿಪಿ ಮಾಡೆಲ್ನಲ್ಲಿ ಅಂತ ಹೇಳಿದ್ದೇವೆ. 35 ವರ್ಷ ಲೀಸ್ ಕೊಡುತ್ತೇವೆ. ನಾವೇನು ಸರ್ಕಾರದಿಂದ ಹಣ ಕೊಡ್ತಿಲ್ಲ. ಅವರು ಹೂಡಿಕೆ ಮಾಡುತ್ತಾರೆ ಎಂದು ತಿಳಿಸಿದರು.
ನಿಗಮ ಮಂಡಳಿಗೆ ಸದಸ್ಯರ ನೇಮಕ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, “ಅಧ್ಯಕ್ಷ, ಉಪಾಧ್ಯಕ್ಷರ ನೇಮಕ ಮಾಡಿದ್ದಾರೆ. ಸದಸ್ಯರನ್ನು ನೇಮಕ ಮಾಡಲು ಕಮಿಟಿ ರಚನೆ ಮಾಡಲಾಗಿತ್ತು. ನನ್ನ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಿದರು. ನಾನು ಪಟ್ಟಿ ಮಾಡಿ ಸಲ್ಲಿಸಿದ್ದೇನೆ. ಸಿಎಂ, ಪಕ್ಷದ ಅಧ್ಯಕ್ಷರಿಗೆ ಸಲ್ಲಿಸಿದ್ದೇನೆ. ಶೀಘ್ರದಲ್ಲೇ ನಿಗಮ ಮಂಡಳಿಗಳಿಗೆ ನೇಮಕ ಮಾಡುತ್ತಾರೆ. ನೇಮಕಕ್ಕೆ ಒಂದು ಪ್ರಕ್ರಿಯೆ ಇದೆ. ಆ ಕಾರಣಕ್ಕೆ ಇನ್ನೂ ಮಾಡಿಲ್ಲ. ಶೀಘ್ರದಲ್ಲೇ ನೇಮಕ ಮಾಡಲಾಗುವುದು” ಎಂದರು.
ಹೈದರಾಬಾದ್ನ ಚಾರ್ಮಿನಾರ್ ಬಳಿಯ ಭೀಕರ ವಿದ್ಯುತ್ ಅವಘಡ ವಿಚಾರಕ್ಕೆ, “ನಮ್ಮ ಅಗ್ನಿಶಾಮಕ ದಳಕ್ಕೆ ಕಠಿಣ ಸೂಚನೆ ಕೊಟ್ಟಿದ್ದೇನೆ. ಮಾಕ್ ಡ್ರಿಲ್ ವೇಳೆಯೇ ಹೈರೈಸ್ ಕಟ್ಟಡಗಳು, ಬೆಂಕಿ ಅವಘಡ ಸಂಭವಿಸುವ ಸ್ಥಳಗಳ ಪರಿಶೀಲಿಸಲು ಸೂಚನೆ ಕೊಟ್ಟಿದ್ದೇವೆ. ವಿದ್ಯುತ್ ಅವಘಡ ಸಂಭವಿಸದಂತೆ ಕ್ರಮವಹಿಸಲು ಸೂಚನೆ ನೀಡಿದ್ದೇನೆ” ಎಂದರು.
