ಬೆಂಗಳೂರು, ಜೂನ್ 11: ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾಲ್ತುಳಿತದಿಂದ ರಾಜಧಾನಿಗೆ ಸಿಗಬೇಕಿದ್ದ ಕ್ರಿಕೆಟ್ ಆತಿಥ್ಯಕ್ಕೆ ಬ್ರೇಕ್ ಬಿದ್ದಿದೆ. ಇಲ್ಲಿನ ಕ್ರಿಕೆಟ್ ಪಂದ್ಯಾವಳಿಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬೇರೆಡೆಗೆ ಸ್ಥಳಾಂತರ ಮಾಡಿದೆ.
ಇದು ಕ್ರಿಕೇಟ್ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ. ಇದೇ ತಿಂಗಳಲ್ಲಿ ನಡೆಯಬೇಕಿದ್ದ ಕ್ರಿಕೆಟ್ ಪಂದ್ಯಾವಳಿಗಳು ಕರ್ನಾಟಕದ ಹೊರಗಿನ ಬೇರೆ ಸ್ಟೇಡಿಯಂಗೆ ಶಿಫ್ಟ್ ಆಗಿವೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನಿರ್ಧಾರದಿಂದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (KSCA) ಹಿನ್ನಡೆ ಆಗಿದೆ. ಇದೇ ನವೆಂಬರ್ 13ರಿಂದ 19ರವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ A ಮತ್ತು ದಕ್ಷಿಣ ಆಫ್ರಿಕಾದ A ಮಧ್ಯದ ಏಕದಿನ ಸರಣಿ ಮೂರು ಪಂದ್ಯಾವಳಿಗಳು ಬೆಂಗಳೂರಿನಲ್ಲಿ ನಡೆಯುವುದಿಲ್ಲ. ಈ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಗುಜರಾತ್ ರಾಜ್ಯದ ರಾಜ್ಕೋರ್ಟ್ ಕ್ರೀಡಾಂಗಣಕ್ಕೆ ಬಿಸಿಸಿಐ ಸ್ಥಳಾಂತರ ಮಾಡಿದೆ.
ಇದರ ಪರಿಣಾಮ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೇಲೆ ಬೀರಿದೆ. ಬಿಸಿಸಿಐ ಯಾವುದೇ ಕಾರಣ ನೀಡದೇ ಪಂದ್ಯಾವಳಿ ಸ್ಥಳಾಂತರ ಮಾಡಿದೆ. ಇದಕ್ಕೆ ಸಮರ್ಥನೆ ನೀಡಿರುವ ಕೆಎಸ್ಸಿಎ, ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಸಮರ್ಥನೆ ಮಾಡಿಕೊಂಡಿದೆ.
ICC ಮಹಿಳಾ ವಿಶ್ವಕಪ್ ಮೇಲೂ ಕಾಲ್ತುಳಿತದ ಎಫೇಕ್ಟ್?
ಈ ಏಕದಿನ ಸರಣಿ ಕ್ರಿಕೆಟ್ಗೆ ಮಾತ್ರವಲ್ಲದೇ, ಇದೇ ವರ್ಷ ಸೆಪ್ಟಂಬರ್ ಹಾಗೂ ನವೆಂಬರ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಬಿಬಿಸಿಐನ ICC ಮಹಿಳಾ ವಿಶ್ವಕಪ್ ಪಂದ್ಯಾವಳಿಗಳು ಬೇರೆ ಸ್ಥಳಾಂತರವಾಗುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ.
ದೇಶದ ಪ್ರಮುಖ ಐದು ಕ್ರೀಡಾಂಗಣಗಳಲ್ಲಿ ಒಂದಾಗಿದೆ. ರಾಯಲ್ ಚಾಲೇಂಜರ್ಸ್ ಬೆಂಗಳೂರು (ಆರ್ಸಿಬಿ) ಗೆಲುವಿನ ಸಂಭ್ರಮಾಚರಣೆ (ಜೂನ್ 4) ವೇಳೆ ನೂಕು ನುಗ್ಗಲಾಗಿ ಇದೇ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. 11 ಮಂದಿ ಆರ್ಸಿಬಿ ಅಭಿಮಾನಿಗಳು ಪ್ರಾಣಬಿಟ್ಟಿದ್ದರು. ಇದಕ್ಕೆ ರಾಜ್ಯ ಸರ್ಕಾರ, ಬಿಸಿಸಿಐ, ಕೆಎಸ್ಸಿಎ ಕೆಲವರನ್ನು ಹೊಣೆ ಮಾಡಿ ದೂರು ನೀಡಲಾಗಿತ್ತು. ಅದರ ವಿಚಾರಣೆ ನಡೆಯುತ್ತಿದೆ.
ಬೆಂಗಳೂರು ಕಾಲ್ತುಳಿತ ಪ್ರಕರಣ ರಾಜ್ಯ ಮಾತ್ರವಲ್ಲದೇ ರಾಷ್ಟ್ರವ್ಯಾಪಿ ಸುದ್ದಿ ಆಯಿತು. ಇದರಿಂದ ಚಿನ್ನಸ್ವಾಮಿ ಸ್ಡೇಡಿಯಂನಿಂದ, ಬಿಸಿಸಿಐ, ಕೆಎಸ್ಸಿಎ ಮುಖ್ಯಸ್ಥರ ವಿರುದ್ಧ ಆಕ್ರೋಶ ಕೇಳಿ ಬಂತು. ಹೀಗಾಗಿ ಮುನ್ನೆಚ್ಚರಿಕೆ ದೃಷ್ಟಿಯಿಂದ ಕ್ರಿಕೆಟ್ ಏಕದಿನ ಸರಣಿ ಪಂದ್ಯಾವಳಿಗಳನ್ನು ರಾಜ್ಕೋಟ್ಗೆ ಶಿಫ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
