ಬೇಲೂರು: ಕಾಡಾನೆ ದಾಳಿಯಿಂದ ನಿನ್ನೆ ಸಂಜೆ ಜೀವ ಕಳೆದುಕೊಂಡ ತಾಲೂಕಿನ ಗುಜ್ಜನಹಳ್ಳಿ ಗ್ರಾಮದ ಅನಿಲ್ ಕುಮಾರ್ ಎಂಬುವರ ಮನೆಗೆ ಇಂದು ಸಂಸದ ಶ್ರೇಯಸ್ ಪಟೇಲ್ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬ್ಯಾದನೆ ಬಳಿಯ ಅಣ್ಣಮಲೈ ಎಸ್ಟೇಟ್ ನಲ್ಲಿ ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಕಾಡಾನೆ ಅನಿಲ್ ಕುಮಾರ್ ನನ್ನು ಬಲಿ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದ ಸಂಸದರು, ಕುಟುಂಬಕ್ಕೆ ಧೈರ್ಯ ಹೇಳಿದರು.
ಕಾಡಾನೆ ಹಾವಳಿ ಬೇಲೂರು ತಾಲೂಕು, ಮಲೆನಾಡು ಭಾಗ ಸೇರಿದಂತೆ ನಮ್ಮ ಜಿಲ್ಲೆಯಲ್ಲಿ ಮಿತಿ ಮೀರಿದೆ. ಕಳೆದ ಹಲವು ವರ್ಷಗಳ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಂಸತ್ ಅಧಿವೇಶನದಲ್ಲಿ ಪ್ರಸ್ತಾಪಿಸಿ ಕೇಂದ್ರದ ಗಮನ ಸೆಳೆದಿದ್ದೇನೆ. ಸಂಬಂಧಪಟ್ಟ ಸಚಿವರೊಡನೆ ನಿರಂತರವಾಗಿ ಪ್ರಸ್ತಾಪಿಸುತ್ತಾ ಬಂದಿದ್ದೇನೆ. ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳುವುದು ನಮಗೆ ಅನಿವಾರ್ಯವಾಗಿದೆ.
ಉಭಯ ಸರ್ಕಾರಗಳ ಸಚಿವರು, ಮತ್ತೊಮ್ಮೆ ನಮ್ಮ ಸರ್ಕಾರದ ಸಿಎಂ-ಡಿಸಿಎಂ,ಅರಣ್ಯ ಸಚಿವರ ಗಮನಕ್ಕೆ ತಂದು ಪರಿಹಾರ ಕಂಡು ಹಿಡಿಯುವ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.
