ಬೇಲೂರು : ತಾಲೂಕಿನಲ್ಲಿ ಉತ್ತಮ ಹೆಸರನ್ನು ಗಳಿಸಿರುವ ಮದಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಾರೀಮರ ಸರ್ಕಾರಿ ಪ್ರೌಢಶಾಲೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಕೆಲ ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವುದು ಖಂಡನೀಯ ಎಂದು ಶಾಲೆಯ ಎಸ್ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೆಲ ದಿನಗಳ ಹಿಂದೆ ತಾರೀಮರ ಸರ್ಕಾರಿ ಪ್ರೌಢಶಾಲೆಯನ್ನು ಬಾಡಿಗೆಗೆ ನೀಡಲಾಗಿದೆ ಎಂಬ ಸುಳ್ಳು ಆರೋಪಗಳನ್ನು ವಕೀಲ ಜಯಣ್ಣ ಹಾಗೂ ಕೆಲವರು ಮಾಡಿದ್ದು, ಈ ಮೂಲಕ ಶಾಲೆಯ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಸಂಬಂಧ ಪೊಲೀಸ್ ಠಾಣೆ, ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗ್ರಾಮದ ಹಿರಿಯ ಮುಖಂಡ ಶಿವಪ್ಪ ಹಾಗೂ ಬಗರ್ ಹುಕುಂ ಸಮಿತಿ ಸದಸ್ಯ ಶಿವರಾಜ್ ಮಾತನಾಡಿ, 2006ರಿಂದ ಇಂದಿನವರೆಗೆ ಶೇ.100 ಫಲಿತಾಂಶ ದಾಖಲಿಸುತ್ತಿರುವ ಈ ಶಾಲೆ ಇಡಿ ತಾಲೂಕಿಗೆ ಮಾದರಿಯಾಗಿದೆ. 2023ರಿಂದ ಪ್ರಾಂಶುಪಾಲರಾದ ಕರಿಬಸಪ್ಪ ಅವರ ನೇತೃತ್ವದಲ್ಲಿ ಶಾಲೆ ಸತತ ಎರಡು ಬಾರಿ ಶೇ.100 ಸಾಧನೆ ಮಾಡಿದ್ದು ಹೆಮ್ಮೆಪಡುವ ವಿಷಯ. ಶಾಲೆಯಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆದಿಲ್ಲ. ರಸ್ತೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ತಂಗಲು ವ್ಯವಸ್ಥೆಯನ್ನು ಗ್ರಾಮಸ್ಥರೇ ಮಾಡಿಕೊಟ್ಟಿದ್ದಾರೆ. ಆದರೆ ಹಣ ವಸೂಲಿಗಾಗಿ ಒಂದು ಪುಡಿ ಗ್ಯಾಂಗ್ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಈ ಶಾಲೆ 10 ಗ್ರಾಮಗಳಿಗೆ ಸೇರಿದ್ದು, ವಕೀಲ ಜಯಣ್ಣ ಅವರಿಗೆ ನಿಜಕ್ಕೂ ಗೌರವ ಇದ್ದರೆ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಬೇಕು, ಅಪಪ್ರಚಾರ ಮಾಡುವುದಲ್ಲ ಇನ್ನು ಇವರ ಗ್ಯಾಂಗ್ ಯಾವ ರೀತಿ ದಂದೆ ಮಾಡುತ್ತಿದ್ದಾರೆ ಎಂಬುವುದು ಇಲ್ಲಿಯ ಎಲ್ಲಾ ಗ್ರಾಮಸ್ಥರಿಗು ತಿಳಿದಿದೆ ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಶಶಿಧರ ಮೌರ್ಯ ಮಾತನಾಡಿ,ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ನಿಂತಿರುವ ಈ ಸರ್ಕಾರಿ ಶಾಲೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಜಯಣ್ಣ ಹಾಗೂ ಅವರ ಸಂಗಡಿಗರು ಪಿತೂರಿ ನಡೆಸುತ್ತಿದ್ದಾರೆ. ಇತ್ತೀಚೆಗೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿಯಲ್ಲಿದೆ ಈ ಶಾಲೆ ಜಿಲ್ಲೆಗೆ ಮಾದರಿಯಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಶಿಕ್ಷಕರೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಪಪ್ರಚಾರ ಮಾಡುವವರ ವಿರುದ್ಧ ಅರೇಹಳ್ಳಿ ಪೊಲೀಸ್ ಠಾಣೆ, ಬಿಇಒ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು. ಕೂಡಲೇ ಅವರು ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಬಿಳಗುಳಿ ಗ್ರಾಮದ ದರ್ಶನ್ ಮಾತನಾಡಿ,ಯಾವುದೇ ಕಾರ್ಮಿಕರಿಗೆ ಶಾಲೆಯ ಕೊಠಡಿಗಳನ್ನು ಬಾಡಿಗೆಗೆ ನೀಡಿಲ್ಲ. ಶಾಲೆಯ ಪಕ್ಕದಲ್ಲಿನ ಸಿಸಿ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಕೆಲ ಕಾರ್ಮಿಕರು ಶಾಲೆಯ ಜಗಲಿಯ ಮೇಲೆ ಮಲಗಿದ್ದಾರೆ. ಇದನ್ನೇ ತಪ್ಪಾಗಿ ಬಿಂಬಿಸಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದರು.
ಪ್ರಾಂಶುಪಾಲ ಕರಿಬಸಪ್ಪ ಮಾತನಾಡಿ,ಶಾಲೆಯ ಯಾವುದೇ ಕೊಠಡಿಯನ್ನು ಯಾರಿಗೂ ತಂಗಲು ನೀಡಿಲ್ಲ. ದಾನಿಗಳ ಸಹಕಾರ ಹಾಗೂ ಶಾಸಕರ ಅನುದಾನದಿಂದ ಶಾಲೆಯನ್ನು ಉನ್ನತೀಕರಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅತ್ಯುತ್ತಮ ಸರ್ಕಾರಿ ಶಾಲೆ ಎಂಬ ಪ್ರಶಸ್ತಿಯನ್ನೂ ಪಡೆದಿದೆ. ಆದರೆ ಕೆಲವರು ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ನೀಡಿ ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಕಾಂತರಾಜು, ಎಸ್ಡಿಎಂಸಿ ಸದಸ್ಯರಾದ ಸೋಮಶೇಖರ್, ಪ್ರಶಾಂತ್, ದಿನೇಶ್, ಅರುಣಾಕ್ಷಿ, ಶೋಭಾವತಿ, ಹರೀಶ್, ಡಿ.ಎಸ್. ಗೌಡ, ಬಸವರಾಜು, ರಘು ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.
