ಬೇಲೂರು: ಮಾಜಿ ಸಚಿವ ಬಿ. ಶಿವರಾಂ ಅವರ ಅರ್ಜಿಯ ಮೇರೆಗೆ ಪುರಸಭೆಯ ಅಧಿಕಾರಿಗಳು ಗುರುವಾರ ನಗರದ ಒಕ್ಕಲಿಗರ ಕಲ್ಯಾಣ ಮಂಟಪ ರಸ್ತೆಯ ಖಾತೆ ನಂ. 33/66 ಮತ್ತು 23/21 ಸಿ ನಿವೇಶನದಲ್ಲಿ ಅಳತೆ ಹಾಗೂ ತೆರವು ಕಾರ್ಯ ಕೈಗೊಂಡ ವೇಳೆ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಸ್ಥಳೀಯ ನಿವಾಸಿ ಕುಸೀದ ಬೇಗಂ ಮತ್ತು ಅವರ ಕುಟುಂಬಸ್ಥರು ಅಳತೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಗಲಾಟೆ ಸೃಷ್ಟಿಸಿದರು. “ನೋಟಿಸ್ ನೀಡದೆ ನಮ್ಮ ಮನೆ ಮತ್ತು ಜಾಗವನ್ನು ತೆರವುಗೊಳಿಸುತ್ತಿದ್ದಾರೆ, ಇದು ಅನ್ಯಾಯ,” ಎಂದು ಬೇಗಂ ಆಕ್ರೋಶಗೊಂಡರು. ಅವರು ಮಾಜಿ ಸಚಿವ ಶಿವರಾಂ ಹಾಗೂ ಪುರಸಭೆಯ ವಿರುದ್ಧ ಆಕ್ರೋಶ ಹೊರ ಹಾಕಿ, “ಕಾಂಗ್ರೆಸ್ ಸರ್ಕಾರವೇ ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದೆ” ಎಂದು ಸ್ಥಳದಲ್ಲೇ ಘೋಷಣೆ ಕೂಗಿದರು.
ಇದನ್ನು ಓದಿ : ಹೊಳೆನರಸೀಪುರ : ಮಾಕವಳ್ಳಿ ಗ್ರಾಮದಲ್ಲಿ ನೀರಿನ ಟ್ಯಾಂಕ್ ಮೇಲೆ ಪೇಂಟ್ ಮಾಡುವಾಗ ಪೇಂಟರ್ ಬಿದ್ದು ಸಾವು
ಪುರಸಭಾ ಮುಖ್ಯಾಧಿಕಾರಿ ಬಸವರಾಜ್ ಶಿಗ್ಗಾವಿ ಅವರು ಮಾತನಾಡಿ, “ಕಾನೂನುಬದ್ಧವಾಗಿ ಅಳತೆಯ ಕಾರ್ಯ ನಡೆಸುತ್ತಿದ್ದ ಅಧಿಕಾರಿಗಳ ಮೇಲೆ ಕಲ್ಲುತೂರಾಟ ನಡೆಸಿ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಲಾಗಿದೆ,” ಎಂದು ಆರೋಪಿಸಿದರು.
ಸ್ಥಳದಲ್ಲಿ ಉದ್ವಿಗ್ನತೆ ಉಂಟಾದ ಹಿನ್ನೆಲೆಯಲ್ಲಿ ಡಿವೈಎಸ್ಪಿ ಪಿ. ಗೋಪಿ ಮತ್ತು ವೃತ್ತ ನಿರೀಕ್ಷಕ ರೇವಣ್ಣ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದರು. ನಂತರ ಸ್ಥಿತಿಯನ್ನು ಪೊಲೀಸರು ನಿಯಂತ್ರಿಸಿದರು.
ಘಟನೆಯ ಹಿನ್ನೆಲೆಯಲ್ಲಿ ಅಳತೆಯ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಪುರಸಭೆ ತಿಳಿಸಿದೆ. ಪುರಸಭಾ ಆರ್ಐ ಲಕ್ಷ್ಮಣ್ ಅವರು ಅಧಿಕಾರಿಗಳ ಮೇಲೆ ಕಲ್ಲುತೂರಾಟ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
