ಬೇಲೂರು, ಮಾ.16: ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ದ್ವಿತೀಯ ಪಿಯುಸಿ ಕಂಪ್ಯೂಟರ್ ಸೈನ್ಸ್ ಪರೀಕ್ಷೆಯಲ್ಲಿ ಗಂಭೀರ ಎಡವಟ್ಟು ಸಂಭವಿಸಿದ್ದು, ಪರೀಕ್ಷೆ ಬರೆಯಲು ಬಂದಿದ್ದ ಆರು ವಿದ್ಯಾರ್ಥಿನಿಯರಿಗೆ ತಪ್ಪು ಪ್ರಶ್ನೆ ಪತ್ರಿಕೆ ನೀಡಿದ ಘಟನೆ ಬೆಳಕಿಗೆ ಬಂದಿದೆ.
ಪರೀಕ್ಷಾ ಮೇಲ್ವಿಚಾರಕರು, ಕಾಲೇಜಿನ ಪ್ರಾಂಶುಪಾಲರು, ಮುಖ್ಯ ಅಧೀಕ್ಷಕರು ಹಾಗೂ ಸಹ ಮುಖ್ಯ ಅಧೀಕ್ಷಕರ ನಿರ್ಲಕ್ಷ್ಯದಿಂದ ಈ ಗೊಂದಲ ಉಂಟಾಗಿದೆ ಎಂದು ಆರೋಪಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ರಿಪೀಟರ್ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ಪ್ರಶ್ನೆ ಪತ್ರಿಕೆಯನ್ನು ಸಾಮಾನ್ಯ ವಿದ್ಯಾರ್ಥಿನಿಯರಿಗೆ ನೀಡಲಾಗಿದ್ದು, ಆರು ಮಂದಿ ವಿದ್ಯಾರ್ಥಿನಿಯರು ಅದನ್ನೇ ಆಧರಿಸಿ ಪರೀಕ್ಷೆ ಬರೆದಿದ್ದಾರೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ಬೇಲೂರು ಜ್ಯೂನಿಯರ್ ಕಾಲೇಜು ಹಾಗೂ ಸರ್ವೋದಯ ಕಾಲೇಜಿನ ಆರು ವಿದ್ಯಾರ್ಥಿನಿಯರು ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದರು. ಕಳೆದ ವರ್ಷ ಮತ್ತು ಈ ವರ್ಷದ ಪಠ್ಯಕ್ರಮದಲ್ಲಿ ಬದಲಾವಣೆಗಳಿದ್ದರಿಂದ ಪ್ರಶ್ನೆಗಳಿಗೆ ಉತ್ತರಿಸುವಲ್ಲಿ ವಿದ್ಯಾರ್ಥಿನಿಯರು ತೊಂದರೆ ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ.
ಹಳೆಯ ಮತ್ತು ಹೊಸ ಪಠ್ಯಕ್ರಮದ ಕೆಲವು ಅಧ್ಯಾಯಗಳು ಒಂದೇ ರೀತಿಯಲ್ಲಿದ್ದ ಕಾರಣ, ಆರಂಭದಲ್ಲಿ ಪ್ರಶ್ನೆ ಪತ್ರಿಕೆಯಲ್ಲಿ ವ್ಯತ್ಯಾಸವಿರುವುದು ವಿದ್ಯಾರ್ಥಿನಿಯರಿಗೆ ಗಮನಕ್ಕೆ ಬಂದಿಲ್ಲ. ಇದರಿಂದ ಪರೀಕ್ಷೆಯ ಸಂಪೂರ್ಣ ಅವಧಿಯಲ್ಲೂ ಅವರು ಅದೇ ಪ್ರಶ್ನೆ ಪತ್ರಿಕೆಯನ್ನು ಆಧರಿಸಿ ಉತ್ತರ ಬರೆದಿದ್ದಾರೆ.
ಪರೀಕ್ಷೆ ಮುಗಿಸಿ ಹೊರಬಂದ ಬಳಿಕ ಇತರ ವಿದ್ಯಾರ್ಥಿನಿಯರ ಪ್ರಶ್ನೆ ಪತ್ರಿಕೆಗಳನ್ನು ಹೋಲಿಕೆ ಮಾಡಿದಾಗ ಮಾತ್ರ ಈ ಎಡವಟ್ಟು ಬೆಳಕಿಗೆ ಬಂದಿದೆ. ತಪ್ಪು ಪ್ರಶ್ನೆ ಪತ್ರಿಕೆ ಬರೆದಿರುವುದು ತಿಳಿದ ತಕ್ಷಣ ವಿದ್ಯಾರ್ಥಿನಿಯರು ತೀವ್ರ ಆತಂಕಕ್ಕೆ ಒಳಗಾಗಿದ್ದು, ಅಂಕ ಕಡಿಮೆಯಾಗುವ ಭೀತಿಯಿಂದ ಕಣ್ಣೀರಿಟ್ಟಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ನಂತರ ಪೋಷಕರು ಮತ್ತು ಶಿಕ್ಷಕರು ಆತಂಕ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಎಡವಟ್ಟಿನಿಂದ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ಧಕ್ಕೆಯಾಗಬಾರದು. ಅಗತ್ಯವಿದ್ದರೆ ಮರುಪರೀಕ್ಷೆ ಅಥವಾ ನ್ಯಾಯಸಮ್ಮತ ಪರಿಹಾರ ನೀಡುವ ಬಗ್ಗೆ ಶಿಕ್ಷಣ ಇಲಾಖೆ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಶಿಕ್ಷಕರು ಹಾಗೂ ಪೋಷಕರು ಈ ಕುರಿತು ಮೇಲಾಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ವಿದ್ಯಾರ್ಥಿನಿಯರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
