ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕಾನ್ಫಿಡೆಂಟ್ ಗ್ರೂಪ್ (Confident Group) ಸಂಸ್ಥಾಪಕ–ಅಧ್ಯಕ್ಷರಾದ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಸಂಜೆ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಬೆಂಗಳೂರಿನ ಆನೇಪಾಳ್ಯದಲ್ಲಿರುವ ತಮ್ಮ ಕಚೇರಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಮಾಹಿತಿ ದೊರಕುತ್ತಿದ್ದಂತೆಯೇ ಅಶೋಕನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.
ಕೇರಳ ಮೂಲದ ಡಾ. ಸಿ.ಜೆ. ರಾಯ್ ಅವರು ಪ್ರಮುಖ ರಿಯಲ್ ಎಸ್ಟೇಟ್ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆಯಾದ ಕಾನ್ಫಿಡೆಂಟ್ ಗ್ರೂಪ್ ಅನ್ನು ಸ್ಥಾಪಿಸಿ, ದಕ್ಷಿಣ ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಹತ್ವದ ಹೆಸರು ಗಳಿಸಿದ್ದರು. ಆದಾಯ ತೆರಿಗೆ ಇಲಾಖೆಯ ಪದೇ ಪದೇ ದಾಳಿಗಳ ಒತ್ತಡದಿಂದ ಈ ನಿರ್ಧಾರ ಕೈಗೊಂಡಿರಬಹುದೆಂದು ಶಂಕಿಸಲಾಗಿದ್ದು, ಪೊಲೀಸರು ಈ ಅಂಶವನ್ನೂ ತನಿಖೆಯ ಭಾಗವಾಗಿ ಪರಿಶೀಲಿಸುತ್ತಿದ್ದಾರೆ.
ನಗರದಲ್ಲಿ ಇವರ ಹೆಸರಿನಲ್ಲಿ ಹಲವು ದೊಡ್ಡ ಹೋಟೆಲ್ಗಳು, ರೆಸಾರ್ಟ್ಗಳು ಹಾಗೂ ಐಷಾರಾಮಿ ಯೋಜನೆಗಳಿದ್ದು, ಈ ಅಕಾಲಿಕ ಮರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮೃತರಿಗೆ ಪತ್ನಿ ಲಿನಿ ರಾಯ್, ಪುತ್ರ ರೋಹಿತ್ ಮತ್ತು ಪುತ್ರಿ ರಿಯಾ ಇದ್ದಾರೆ. ಪುತ್ರ ರೋಹಿತ್ ಅವರು ಕಾನ್ಫಿಡೆಂಟ್ ಗ್ರೂಪ್ನ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವಿನ್ಯಾಸ ವಿಭಾಗವನ್ನು ನಿರ್ವಹಿಸುತ್ತಿದ್ದಾರೆ.
ಇದನ್ನು ಓದಿ: ಹಾಸನ: ಊಟಕ್ಕೆ ಮನೆಗೆ ತೆರಳುತ್ತಿದ್ದ ಹೆಡ್ಕಾನ್ಸ್ಟೇಬಲ್ಗೆ ನಗರ ಸಾರಿಗೆ ಬಸ್ ಡಿಕ್ಕಿ: ಧಾರುಣ ಸಾವು
2005ರಲ್ಲಿ ಸ್ಥಾಪಿತವಾದ ಕಾನ್ಫಿಡೆಂಟ್ ಗ್ರೂಪ್ ಇದುವರೆಗೆ 65ಕ್ಕೂ ಹೆಚ್ಚು ಐಷಾರಾಮಿ ಯೋಜನೆಗಳನ್ನು ಪೂರ್ಣಗೊಳಿಸಿದ್ದು, ವಸತಿ ಅಪಾರ್ಟ್ಮೆಂಟ್ಗಳು, ವಿಲ್ಲಾಗಳು, ವಾಣಿಜ್ಯ ಸಂಕೀರ್ಣಗಳು, ಶಿಕ್ಷಣ, ಆತಿಥ್ಯ ಮತ್ತು ಮನರಂಜನಾ ಕ್ಷೇತ್ರಗಳಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದೆ. ಒಟ್ಟಾರೆ 165 ಯೋಜನೆಗಳನ್ನು ಪೂರ್ಣಗೊಳಿಸಿ, 43 ಮಿಲಿಯನ್ ಚದರ ಅಡಿಗೂ ಹೆಚ್ಚು ಪ್ರದೇಶವನ್ನು ಅಭಿವೃದ್ಧಿಪಡಿಸಿದ್ದು, 15,000ಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ.
ಡಾ. ಸಿ.ಜೆ. ರಾಯ್ ಅವರು ಸ್ವಿಟ್ಜರ್ಲ್ಯಾಂಡ್ನ SBS ಬಿಸಿನೆಸ್ ಸ್ಕೂಲ್ನಿಂದ ಬಿಸಿನೆಸ್ ಆಡ್ಮಿನಿಸ್ಟ್ರೇಷನ್ನಲ್ಲಿ ಡಾಕ್ಟರೇಟ್ ಪಡೆದಿದ್ದರು. ಕೇರಳ, ಬೆಂಗಳೂರು ಮಾತ್ರವಲ್ಲದೆ ದುಬೈ ಮಾರುಕಟ್ಟೆಯಲ್ಲಿಯೂ ತಮ್ಮ ವ್ಯಾಪಾರವನ್ನು ವಿಸ್ತರಿಸಿದ್ದರು. ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿದ್ದ ಅವರು, ಸ್ಲೋವಾಕ್ ಗಣರಾಜ್ಯದ ಗೌರವ ಕಾನ್ಸಲ್ ಆಗಿಯೂ ಕರ್ನಾಟಕ ಹಾಗೂ ಕೇರಳದಲ್ಲಿ ಸೇವೆ ಸಲ್ಲಿಸಿದ್ದರು.
ಐಷಾರಾಮಿ ಹಾಗೂ ಸ್ಪೋರ್ಟ್ಸ್ ಕಾರುಗಳ ಮೇಲಿನ ಅಪಾರ ಆಸಕ್ತಿಯುಳ್ಳ ಡಾ. ರಾಯ್, ದುಬೈ ಮತ್ತು ಭಾರತದಲ್ಲಿ ಹಲವು ದುಬಾರಿ ಕಾರುಗಳನ್ನು ಹೊಂದಿದ್ದರು. ಉದ್ಯಮಶೀಲತೆ, ಐಷಾರಾಮಿ ಜೀವನಶೈಲಿ ಹಾಗೂ ಬಹುಮುಖ ವ್ಯವಹಾರಗಳಿಂದ ಗುರುತಿಸಿಕೊಂಡಿದ್ದ ಡಾ. ಸಿ.ಜೆ. ರಾಯ್ ಅವರ ಅಕಾಲಿಕ ನಿಧನ ಉದ್ಯಮ ವಲಯಕ್ಕೆ ಭಾರೀ ಆಘಾತ ತಂದಿದೆ.