ಬೆಂಗಳೂರು : ನಮ್ಮ ಜೀವನದಲ್ಲಿ ವೈಜ್ಞಾನಿಕ ವಿಚಾರಗಳನ್ನು ಬೆಳೆಸಿಕೊಂಡು, ಸಾಂಪ್ರದಾಯಕವಾಗಿ ತುಂಬಿರುವ ಮೌಢ್ಯದ ಬೇರು ಕಿತ್ತೊಗಯದೇ ಇದ್ದರೇ ಬಡತನವನ್ನು ಕಿತ್ತೊಗೆಯಲು ಸಾಧ್ಯವಿಲ್ಲ. ವೈಜ್ಞಾನಿಕವಾಗಿ ವಿಷಯ ವಿಶ್ಲೇಷಣೆ ಮಾಡಡಿದ್ದರೆ ಈ ಸಮಾಜ, ದೇಶ ಬೆಳವಣಿಗೆ ಆಗುವುದಿಲ್ಲ ಎಂದು ಹಿರಿಯ ಸಾಹಿತಿ ಬೈರಮಂಗಲ ರಾಮೇಗೌಡ ತಿಳಿಸಿದ್ದಾರೆ.
ಬುದ್ದ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಪ್ರೊ . ಕೃಷ್ಣಪ್ಪ ಟ್ರಸ್ಟ್ ಹಾಗೂ ವೀರಲೋಕ ಪಬ್ಲಿಕೇಶನ್ ಸಹಕಾರದಲ್ಲಿ ವತಿಯಿಂದ ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ವೈಜ್ಞಾನಿಕ, ವೈಚಾರಿಕ ಸಾಹಿತ್ಯ ಸಮಾವೇಶ-೨೦೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾವು ಬರೆಯುವ ಸಾಹಿತ್ಯ ಸೂಕ್ಷ್ಮತೆ ಪಡೆದುಕೊಳ್ಳದೇ ಇದ್ದರೆ, ವೈಚಾರಿಕತೆಯ ಅಂಶ ಮೈಗೂಡಿಸಿಕೊಳ್ಳದೇ ಹೋದರೇ, ಪ್ರಶ್ನಿಸುವ ಮತ್ತು ಉತ್ತರ ಪಡೆಯುವ ಮನೋಧರ್ಮವನ್ನು ರೂಪಿಸಿಕೊಳ್ಳದಿದ್ದರೆ ಸಮಾಜಕ್ಕೆ ಏನನ್ನು ಮಾಡಲು ಸಾಧ್ಯವಿಲ್ಲ ಎಂದರು.

ಸಾಹಿತಿಯಾಗಿ ನಮ್ಮ ಸುತ್ತಮುತ್ತ ನಡೆಯುತ್ತಿರುವ ಸೂಕ್ಷ್ಮತೆಗಳನ್ನು ಗಮನಿಸುತ್ತಿರಬೇಕು. ಸಾಹಿತಿ ಜನರ ನಡುವೆ ಹೋಗದೇ ಇದ್ದರೆ, ನಾವು ಬರೆಯುವ ಸಾಹಿತ್ಯ ಯಾರಿಗೆ ಮುಟ್ಟುತ್ತಿದೆ ಎಂದು ಪ್ರಶ್ನಿಸಿಕೊಳ್ಳದೇ ಇದ್ದರೆ ಅದು ವ್ಯರ್ಥ. ಬರೆಯುವ ಸಾಹಿತ್ಯ ಯಾರಿಗೆ ಮುಟ್ಟುತ್ತಿದೆ ಎಂದು ಪ್ರಸ್ನಿಸಿಕೊಳ್ಳದಿದ್ದರೆ ಸಾಹಿತಿಕಾರರು ಎಂದು ಹಣೆಪಟ್ಟಿ ಅಂಟಿಸಿಕೊಂಡು, ಸಮಾರಂಭಗಳಲ್ಲಿ ಭಾಗವಹಿಸಿಕೊಂಡು, ಪುಸ್ತಕಗಳನ್ನು ಪ್ರಕಟಿಸಿಕೊಂಡು, ಪ್ರಶಸ್ತಿಗಳನ್ನು ತೆಗೆದುಕೊಳ್ಳುತ್ತೇವೆಯೇ ಹೊರತು ಅದರಿಂದ ಈ ದೇಶಕ್ಕೆ, ನಾಡಿನ ಸಮಾಜಕ್ಕೆ ಏನು ಪ್ರಯೋಜನವಿಲ್ಲ. ವೈಜ್ಞಾನಿಕತೆಯ ಸೂಕ್ಷ್ಮತೆಗಳನ್ನು ಬರವಣಿಗೆಯಲ್ಲಿ ಕಾಪಾಡಿಕೊಳ್ಳಬೇಕು ಎಂದರು .
ಸಮಾಜ ಸೇವೆ, ಸಾಹಿತ್ಯ ಸಂಸ್ಕೃತಿ, ಮಾನಸಿಕ ಮತ್ತು ಸಾಮಾಜಿಕ ವಿಶಾಲತೆಗಳಿಗಿಂತ ಹಣಗಳಿಸುವಿಕೆ ಅತ್ಯಂತ ಮುಖ್ಯವಾಗುತ್ತದೆ. ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆಯೂ ಕುವೆಂಪು ಅವರ ವೈಚಾರಿಕ ಪ್ರಜ್ಞೆ ಇಂದಿನ ಸಂದರ್ಭಕ್ಕೆ ಅತ್ಯಗತ್ಯವಾಗಿದೆ ಎಂದು ಸಮಾವೇಶದ ಅಧ್ಯಕ್ಷರು, ವಿಜ್ಞಾನ ಲೇಖಕರಾದ ಡಾ. ಆರ್. ಎಸ್. ರವೀಂದ್ರ ಅಭಿಪ್ರಾಯಪಟ್ಟರು .

ಮಧ್ಯಾಹ್ನ ನಡೆದ ಕವಿಗೋಷ್ಠಿ ವಿಚಾರ ಸಂಕಿರಣ ಮತ್ತು “ಹೋರಾಟಗಾರ್ತಿ ಶಾಂತಲಾ ಸುರೇಶ್ ಅವರ ಎರಡು ಕೃತಿಗಳಾದ ಸಾಹುಕಾರ ನಂದೀಶ ಕಥಾ ಸಂಕಲನ ಹಾಗೂ ಮನದ ಕಡಲು ಕವನ ಸಂಕಲನ ಮತ್ತು ಕವಯಿತ್ರಿ ಶ್ರೀಮತಿ ವಿಜಯಾ ಗುರುರಾಜ್ ಅವರ ಕವನ ಸಂಕಲನ ಪಕಳೆಗಳು “ಕೃತಿಗಳನ್ನು ವಿದ್ವಾಂಸರಾದ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪ ಲೋಕಾರ್ಪಣೆ ಮಾಡಿ ಸಂಸಾರ ತಾಪತ್ರಯಗಳ ನಡುವೆ ಈ ಇಬ್ಬರು ಲೇಖಕಿಯರ ಸಾಹಿತ್ಯ ಸಂಸ್ಕೃತಿ ಪ್ರೀತಿ ನಿಜಕ್ಕೂ ಆದರಣೀಯ ಎಂದರು.
ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ರಂಗಭೂಮಿ ಕಲಾವಿದರು, ಸಾಹಿತಿಗಳಾದ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಅವರು ಸಾಹಿತ್ಯದ ಬರವಣಿಗೆ, ಕಲೆಯು ಎಲ್ಲರಿಗೂ ಸಿದ್ಧಿಸಲಾರದು, ಯಾರು ಆಸಕ್ತಿ, ಶ್ರದ್ಧೆ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಬೇಕೆಂಬ ಕಳಕಳಿ ಇರುವುದೊ ಅಂತಹವರಿಗೆ ಸಮಾಜ ಸದಾ ಗೌರವಿಸುತ್ತದೆ ಎಂದರು. ಬಿಡುಗಡೆ ಆದ ಕೃತಿಗಳನ್ನು ಕುರಿತು ಲೇಖಕರಾದ ಡಾ.ಆರ್.ವಾದಿರಾಜ್, ಕುಂಚ ಕಲಾವಿದೆ ಶಾಂತಿ ವಾಸು ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ನರಸಿಂಹಮೂರ್ತಿ ಅವರು ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ಬಗೆಯನ್ನು ಇವತ್ತಿನ ಕಾಲಘಟ್ಟದಲ್ಲಿ ಶಿಕ್ಷಣ, ಕಲೆ ಸಾಹಿತ್ಯ ಸಂಸ್ಕೃತಿಗಳು ಸಾಮಾನ್ಯವಾಗಬೇಕಿದೆ, ಕುವೆಂಪು, ಹೆಚ್ ನರಸಿಂಹಯ್ಯ, ಜಿಎಸ್ ಶಿವರುದ್ರಪ್ಪ ಮುಂತಾದ ಗಣ್ಯರು ನಮಗೆ ಸಾಹಿತ್ಯ ಮತ್ತು ತಮ್ಮ ಬದುಕಿನ ಮೂಲಕ ತಿಳಿಸಿದ್ದಾರೆ ಎಂದರು.
ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ರಾಮೇಗೌಡರು ಉದ್ಯಮಿ ಶಶಿಕಾಂತ್ ರಾವ್ ನೀಡಿರುವ ಪುನೀತ್ ರಾಜಕುಮಾರ್ ಯುವ ಸಾಹಿತ್ಯ ಪ್ರಶಸ್ತಿಯನ್ನು ಯುವ ಸಾಹಿತಿಗಳಾದ ಡಾ.ಆರ್.ಎಸ್.ರವೀಂದ್ರ ಮತ್ತು ಆಶಾಶಿವುಗೌಡರವರಿಗೆ ಪ್ರದಾನ ಮಾಡಿ ಮಾತನಾಡಿ, ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ ಕುವೆಂಪು ತಮ್ಮ ಆಗಾಧ ಪಾಂಡಿತ್ಯದ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದು, ಇಂದಿನ ವಿಶ್ವವನ್ನು ಆಳುವುದು ವೈಚಾರಿಕತೆಯೇ ಹೊರತು, ವ್ಯಕ್ತಿ ಅಥವಾ ನಂಬಿಕೆಗಳಲ್ಲ. ಕುವೆಂಪು ಇಂದು ನಮ್ಮ ನಡುವೆ ಇಲ್ಲದಿದ್ದರೂ ಅವರ ವೈಚಾರಿಕತೆಗಳು ಮತ್ತು ವಿಶ್ವಮಾನವ ಸಂದೇಶ ಇಂದಿಗೂ ಜೀವಂತ ಎಂದು ಹೇಳಿದರು.
ಈ ವೇಳೆ ಸಾಹಿತಿ ಶಶಿಕಾಂತ್ ರಾವ್ ದಾನ ಧರ್ಮ ಸೇವಾ ಮನೋಭಾವ ಇವತ್ತಿನ ದಿನಗಳಲ್ಲಿ ಎಲ್ಲಾ ಮರೆತು ಹೋಗಿದೆ ಎಂದರ. ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷ ಡಾ. ಎಸ್ ರಾಮಲಿಂಗೇಶ್ವರ (ಸಿಸಿ ರಾ) ಪ್ರಾಸ್ತಾವಿಕ ಭಾಷಣ ಮಾಡಿ ಸಮಾಜ ಸಂಸ್ಕೃತಿ ಇವತ್ತಿನ ಇರುವಿಕೆಯನ್ನು ಸೋದಾಹರಣವಾಗಿ ತಿಳಿಸಿ ಎಲ್ಲರನ್ನು ಪ್ರೀತಿಯಿಂದ ಸ್ವಾಗತಿಸಿದರು.

ಕಾರ್ಯದರ್ಶಿ ಸಿ.ಹೇಮಾವತಿ, ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ ನ ಇಂದಿರಾ ಕೃಷ್ಣಪ್ಪ, ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ಡಾ.ಕೃಷ್ಣ ಹಾನ್ ಬಾಳ್ ಬಸವ ಟಿವಿ ಲಿಪಿ ನಿರ್ದೇಶಕ ಕಿರಣ್ ಚಾಕೋತೆ, ಬಿಎಂಟಿಸಿ ವೆಂಕಟೇಶ್, ಉಪನ್ಯಾಸಕ ಡಾ.ಚೌಡಪ್ಪ ಇನ್ನಿತರರಿದ್ದರು.
