ಬೆಂಗಳೂರು: ರಾಜ್ಯದ ಯಾವುದೇ ಭಾಗದಲ್ಲಿ ಎರಡು ಎಕರೆವರೆಗಿನ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಭೂ ಪರಿವರ್ತನೆಯ ಅವಶ್ಯಕತೆಯಿಂದ ವಿನಾಯಿತಿ ನೀಡಲು ಸರ್ಕಾರ ಮುಂದಾಗಿದೆ. ಡಿಜಿಟಲ್ ಸಹಿಯೊಂದಿಗೆ ನಾನಾ ನೊಂದಣಿ ಪ್ರಕ್ರಿಯೆಗಳನ್ನು ಸರಳಗೊಳಿಸುವ ಉದ್ದೇಶದಿಂದ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿತ್ತು.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಂಡಿಸಿದ ಕರ್ನಾಟಕ ಭೂ ಸುಧಾರಣೆಗಳು ಮತ್ತು ಕೆಲವು ಇತರ ಕಾನೂನುಗಳ ತಿದ್ದುಪಡಿ ವಿಧೇಯಕ – 2025 ಹಾಗೂ ನೋಂದಣಿ ಕರ್ನಾಟಕ ತಿದ್ದುಪಡಿ ವಿಧೇಯಕ – 2025ಕ್ಕೆ ಸದನವು ಪಕ್ಷಾತೀತ ಪ್ರಶಂಸೆಯೊಂದಿಗೆ ಸರ್ವಾನುಮತ ಅನುಮೋದನೆ ನೀಡಿದೆ.
ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರ ಮತ್ತು ವಿಳಂಬಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈ ತಿದ್ದುಪಡಿಗಳನ್ನು ತರಲಾಗಿದೆ. ಎಂಎಸ್ಎಂಇ ವಲಯದ ದೀರ್ಘಕಾಲದ ಬೇಡಿಕೆ ಹಾಗೂ ವಿಶೇಷವಾಗಿ ನವೀಕರಿಸಬಹುದಾದ ಇಂಧನ ವಲಯದ ಮನವಿಯನ್ನು ಗಮನದಲ್ಲಿಟ್ಟುಕೊಂಡು, ಬಜೆಟ್ ಘೋಷಣೆಯಂತೆ 2 ಎಕರೆವರೆಗಿನ ಜಾಗದಲ್ಲಿ ಕೈಗಾರಿಕೆ ಮಾಡಲು ವಿನಾಯಿತಿ ನೀಡಲಾಗುತ್ತದೆ.
ಹಿಂದಿನಂತೆ ಕೃಷಿ ಸಂಬಂಧಿ ಕೈಗಾರಿಕೆಗಳಿಗೆ ಮಾತ್ರ ಸೀಮಿತವಾಗಿದ್ದ ಈ ಸಡಿಲಿಕೆಯನ್ನು ಈಗ ಎಲ್ಲ ಕೈಗಾರಿಕಾ ವಲಯಗಳಿಗೆ ವಿಸ್ತರಿಸಲಾಗಿದೆ.
