ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಬಾಡಿಗೆ ಮನೆಗಳ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಮನೆ ಮಾಲೀಕರ ಹಾಗೂ ಬಾಡಿಗೆದಾರರ ನಡುವಿನ ತಕರಾರುಗಳಿಗೆ ಪರಿಹಾರ ಕಂಡುಕೊಳ್ಳಲು ಕರ್ನಾಟಕ ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದೆ.
ಕರ್ನಾಟಕ ಬಾಡಿಗೆ ಕಾಯ್ದೆ 1999ಕ್ಕೆ ತಿದ್ದುಪಡಿ ತರಲು ಸಚಿವ ಸಂಪುಟ ಅನುಮೋದನೆ ನೀಡಿದ್ದು, ಇದರಿಂದ ಬಾಡಿಗೆ ವಿವಾದಗಳಿಗೆ ಸಂಬಂಧಿಸಿದ ಅನೇಕ ನಿಯಮಗಳಲ್ಲಿ ಬದಲಾವಣೆ ತರಲಾಗುತ್ತಿದೆ.
ಪ್ರಮುಖ ಬದಲಾವಣೆಗಳು:
- ಬಾಡಿಗೆ ವಿವಾದಗಳನ್ನು ಇನ್ನುಮುಂದೆ ಅಪರಾಧವಾಗಿ ಪರಿಗಣಿಸಲಾಗುವುದಿಲ್ಲ.
- ಹಿಂದೆ ಜಾರಿಗೆ ಇದ್ದ ಒಂದು ತಿಂಗಳ ಜೈಲು ಶಿಕ್ಷೆ provision ಸಂಪೂರ್ಣ ತೆಗೆದುಹಾಕಲಾಗಿದೆ.
- ಆದರೆ ದಂಡದ ಮೊತ್ತವನ್ನು 10 ರಿಂದ 20 ಪಟ್ಟು ಹೆಚ್ಚಿಸಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ.
- ಬಾಡಿಗೆದಾರರಿಂದ ಅನಧಿಕೃತ ಉಪಬಾಡಿಗೆ, ಮನೆಮಾಲೀಕರಿಂದ ಕಾನೂನುಬಾಹಿರ ಹೊರಹಾಕುವುದು, ಆಸ್ತಿ ವಿವರಗಳನ್ನು ತಪ್ಪಾಗಿ ನೀಡುವುದು, ಮಧ್ಯವರ್ತಿಗಳು ಕಾನೂನಿನಲ್ಲಿ ನೋಂದಣಿ ಮಾಡದೇ ಕಾರ್ಯ ನಿರ್ವಹಿಸುವುದು ಇತ್ಯಾದಿ ಅಪರಾಧಗಳ ಪಟ್ಟಿಗೆ ಸೇರಿವೆ.
ಬದಲಾವಣೆಯ ಹಿನ್ನಲೆ:
ಕೇಂದ್ರದ ಜನ ವಿಶ್ವಾಸ್ ಕಾಯಿದೆ 2025 ಅನುಗುಣವಾಗಿ ಈ ತಿದ್ದುಪಡಿ ತರಲಾಗುತ್ತಿದ್ದು, ಸಣ್ಣ ಅಪರಾಧಗಳಿಗೆ ಜೈಲು ಶಿಕ್ಷೆಯ ಬದಲು ದಂಡ ಮತ್ತು ಎಚ್ಚರಿಕೆಗಳನ್ನು ವಿಧಿಸುವುದು ಮುಖ್ಯ ಉದ್ದೇಶವಾಗಿದೆ.
ನಗರೀಕರಣದ ವೇಗ ಹೆಚ್ಚುತ್ತಿದ್ದಂತೆ ಬಾಡಿಗೆ ಮನೆಗಳ ಬಳಕೆ ವ್ಯಾಪಕವಾಗಿದ್ದು, ಮಾಲೀಕರ-ಬಾಡಿಗೆದಾರರ ಜಗಳಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದನ್ನು ಓದಿ: ಭಾರತದ ಕ್ಯಾನ್ಸರ್ ನೋಂದಾಣಿ ಕೇಂದ್ರ ಸ್ಥಾಪನೆಯ ಇತಿಹಾಸ ಮತ್ತು ತಂಬಾಕು ಬಳಕೆ ವರದಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತಿದ್ದುಪಡಿ ಸೇರಿದಂತೆ ಹಲವು ನಿರ್ಣಯಗಳಿಗೆ ಒಪ್ಪಿಗೆ ದೊರೆತಿದೆ. ಚಳಿಗಾಲದ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸುವ ನಿರೀಕ್ಷೆಯಿದೆ.
