ಬೆಂಗಳೂರು, ಏಪ್ರಿಲ್ 10, 2026: ನಗರದ ಸರ್ಜಾಪುರದಲ್ಲಿರುವ ಗ್ರೀನ್ ವುಡ್ ಹೈ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ 2026ನೇ ಸಾಲಿನ ಐಬಿ ಡಿಪ್ಲೊಮಾ ವಿದ್ಯಾರ್ಥಿಗಳ ಗ್ರಾಜುಯೇಷನ್ ದಿನಾಚರಣೆ ಸಂಭ್ರಮದಿಂದ ನೆರವೇರಿತು. “ಪಯೊನೀರಿಂಗ್ ಪಾಸಿಬಿಲಿಟೀಸ್” ಎಂಬ ಆಶಯದಡಿ ನಡೆದ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಭಾಗವಹಿಸಿ ಪದವಿ ಪಡೆದ ವಿದ್ಯಾರ್ಥಿಗಳ ಸಾಧನೆಯನ್ನು ಸ್ಮರಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಂಧ್ರ ಪ್ರದೇಶ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ, ಐಟಿ, ಆರ್ಟಿಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ಇಲಾಖೆಗಳ ಸಚಿವರಾದ ನಾರಾ ಲೋಕೇಶ್ ಆಗಮಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಶಿಕ್ಷಣವೆಂದರೆ ಕೇವಲ ಏನು ಕಲಿಯುತ್ತೀರಿ ಎಂಬುದಲ್ಲ, ನೀವು ಹೇಗೆ ಆಲೋಚಿಸುತ್ತೀರಿ ಎಂಬುದಾಗಿದೆ. ಟ್ರೆಂಡ್ಗಳನ್ನು ಅನುಸರಿಸುವುದಕ್ಕಿಂತ ಉದ್ದೇಶವನ್ನು ಅನುಸರಿಸಿ. ಟ್ರೆಂಡ್ಗಳು ಬದಲಾಗುತ್ತವೆ, ಆದರೆ ಉದ್ದೇಶ ಶಾಶ್ವತವಾಗಿರುತ್ತದೆ,” ಎಂದು ಹೇಳಿದರು. ವಿದ್ಯಾರ್ಥಿಗಳು ಸಮಗ್ರತೆ, ನೈತಿಕತೆ ಮತ್ತು ಜವಾಬ್ದಾರಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಗ್ರಾಜುಯೇಷನ್ ಕಾರ್ಯಕ್ರಮವು ವಿದ್ಯಾರ್ಥಿಗಳ ಜೀವನದ ಮಹತ್ವದ ಕ್ಷಣವಾಗಿದ್ದು, ಭವಿಷ್ಯದ ನಾಯಕತ್ವದತ್ತ ಹೆಜ್ಜೆ ಇಡುವ ಆರಂಭ ಎಂದು ಅವರು ಅಭಿಪ್ರಾಯಪಟ್ಟರು. “ಯಾರಿಗೂ ಹೇಳಲಾಗದ ಕೆಲಸವನ್ನು ಎಂದಿಗೂ ಮಾಡಬೇಡಿ” ಎಂದು ಹೇಳುವ ಮೂಲಕ ನೈತಿಕ ಮೌಲ್ಯಗಳ ಮಹತ್ವವನ್ನು ಒತ್ತಿಹೇಳಿದರು.

ಕ್ಲಾಸ್ ಆಫ್ 2026 ವಿದ್ಯಾರ್ಥಿಗಳು ಅಸಾಧಾರಣ ಶೈಕ್ಷಣಿಕ ಸಾಧನೆ ತೋರಿದ್ದು, ಜಾಗತಿಕ ಖ್ಯಾತಿಯ ಅನೇಕ ವಿಶ್ವವಿದ್ಯಾಲಯಗಳಿಂದ ಪ್ರವೇಶ ಹಾಗೂ ಆಫರ್ಗಳನ್ನು ಪಡೆದಿದ್ದಾರೆ. ಅಮೆರಿಕಾ, ಯುಕೆ, ಯೂರೋಪ್, ಕೆನಡಾ ಮತ್ತು ಏಷ್ಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ನಿರು ಅಗರ್ವಾಲ್ ಮಾತನಾಡಿ, “ಈ ದಿನ ಅಂತ್ಯವಲ್ಲ, ಬದಲಿಗೆ ಭವಿಷ್ಯದ ಹೊಸ ಆರಂಭ. ನಮ್ಮ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಜೊತೆಗೆ ಮೌಲ್ಯಾಧಾರಿತ ಜೀವನವನ್ನು ಅಳವಡಿಸಿಕೊಂಡಿದ್ದಾರೆ,” ಎಂದು ಹೇಳಿದರು.
ವಿದ್ಯಾರ್ಥಿಗಳು ಜಾಗತಿಕ ಮಟ್ಟದ ಶಿಷ್ಯವೇತನಗಳನ್ನು ಗಳಿಸಿರುವುದು ವಿಶೇಷವಾಗಿದ್ದು, ಹಲವು ವಿದ್ಯಾರ್ಥಿಗಳು ಲಕ್ಷಾಂತರ ಡಾಲರ್ ಮೌಲ್ಯದ ಸ್ಕಾಲರ್ಶಿಪ್ಗಳನ್ನು ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಔಪಚಾರಿಕ ಕಾರ್ಯಕ್ರಮಗಳು, ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನಗಳು ಹಾಗೂ ಸಂಪ್ರದಾಯಬದ್ಧ ಕ್ಯಾಪ್ ಟಾಸ್ ಮೂಲಕ ಸಂಭ್ರಮ ವ್ಯಕ್ತಪಡಿಸಲಾಯಿತು. ಕಾರ್ಯಕ್ರಮವು ಹೆಮ್ಮೆ, ಸಂತೋಷ ಮತ್ತು ಭರವಸೆಯ ನಡುವೆ ಸಮಾರೋಪಗೊಂಡಿತು.
