ಬೆಂಗಳೂರು: ಶೇಷಾದ್ರಿಪುರಂ ಕಾಲೇಜಿನ ಕನ್ನಡ ಪ್ರಾಧ್ಯಾಪಕ, ಸಂಸ್ಕೃತಿ ಚಿಂತಕ ಹಾಗೂ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಎಸ್. ರಾಮಲಿಂಗೇಶ್ವರ (ಸಿಸಿರಾ) ಅವರಿಗೆ 2025ನೇ ಸಾಲಿನ ಕರ್ನಾಟಕ ರತ್ನ ಡಾ. ದೇಜಗೌ ಕನ್ನಡ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ದಶಮುಖ ಸಾಮಾಜಿಕ ಸೇವಾ ಸಂಸ್ಥೆಯು ನೀಡುವ ಈ ಗೌರವಕ್ಕೆ ಸಂಸ್ಥೆಯ ಅಧ್ಯಕ್ಷ ಹಾಗೂ ಪತ್ರಕರ್ತ ಬೊಮ್ಮೇಗೌಡರು ಡಾ. ಸಿಸಿರಾ ಅವರನ್ನು ಆಯ್ಕೆ ಮಾಡಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಇದೇ ಶನಿವಾರ ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ಕನ್ನಡ ಭವನದ ‘ನಯನ’ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಎಂ. ಸತೀಶ್ ರೆಡ್ಡಿ ಪ್ರಶಸ್ತಿಯನ್ನು ಪ್ರದಾನ ಮಾಡುವರು.
ಇತಿಹಾಸ ತಜ್ಞ ಡಾ. ತಲಕಾಡು ಚಿಕ್ಕ ರಂಗೇಗೌಡ ಮತ್ತು ಕನ್ನಡಪರ ಹೋರಾಟಗಾರ ಸಿ.ಕೆ. ರಾಮೇಗೌಡರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದ ಅನೇಕ ಗಣ್ಯರನ್ನು ಸನ್ಮಾನಿಸುವುದರ ಜೊತೆಗೆ, ಸರ್ಕಾರಿ ಶಾಲಾ ಮಕ್ಕಳಿಗೆ ಸಹಾಯಧನ ವಿತರಣೆ ಕೂಡ ನಡೆಯಲಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

