ಬೆಂಗಳೂರು ಹಳದಿ ಲೈನ್ ಮೆಟ್ರೋ ಕಾರ್ಯಾಚರಣೆ ಶುರುವಾಯ್ತು. ಈಗ ಬೆಂಗಳೂರು ಮೆಟ್ರೋ ಹಂತ-2 ಕೆಲಸಗಳು ಯಾವಾಗ ಮುಗಿಯುತ್ತೆ. ಯಾವಾಗ ಆರಂಭ ಆಗುತ್ತೆ ಅನ್ನೋ ಪ್ರಶ್ನೆಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಈಗಾಗಲೇ ಈ ಮಾರ್ಗದ ಕೆಲಸಗಳು ಅಂತಿಮ ಹಂತಕ್ಕೆ ಬಂದಿದೆ. ಹಾಗಾದ್ರೆ ಕೆಲಸಗಳು ಪೂರ್ಣಗೊಂಡು ಕಾರ್ಯಾಚರಣೆ ಯಾವಾಗ ಆರಂಭ?
ಇಲ್ಲಿ ತಿಳಿಯಿರಿ.
ಇನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಕಾರ, ಈ ಹಂತವು 2026 ಸೆಪ್ಟೆಂಬರ್ ವೇಳೆಗೆ ಸಂಪೂರ್ಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ವಿಶೇಷವಾಗಿ, ಕೊನೆಯ ಕಾರಿಡಾರ್ ಆಗಿರುವ ಪಿಂಕ್ ಲೈನ್ ಎರಡೂ ಹಂತಗಳಲ್ಲಿ ಪ್ರಾರಂಭವಾಗಲಿದೆ.
ಪಿಂಕ್ ಲೈನ್: ಎರಡು ಹಂತಗಳಲ್ಲಿ ಉದ್ಘಾಟನೆ:
ಪಿಂಕ್ ಲೈನ್ನ ಕಲೇನಾ ಅಗ್ರಹಾರದಿಂದ ತಾವರೆಕೆರೆವರೆಗಿನ 7.5 ಕಿ.ಮೀ ಎತ್ತರದ ಮಾರ್ಗವು 2026 ಮಾರ್ಚ್ ಒಳಗೆ ಚಾಲನೆ ಕಾಣಲಿದೆ. ಆದರೆ ಡೈರಿ ಸರ್ಕಲ್ನಿಂದ ನಾಗವಾರವರೆಗೆ 13.8 ಕಿ.ಮೀ ಉದ್ದದ ಭೂಗತ ಮಾರ್ಗವು ಸೆಪ್ಟೆಂಬರ್ 2026 ರಲ್ಲಿ ಕಾರ್ಯಾರಂಭ ಮಾಡುವ ಗುರಿಯಿದೆ.
ಹಿಂದಿನ ಯೋಜನೆ ಪ್ರಕಾರ, ಎತ್ತರದ ಭಾಗವನ್ನು ಸೆಪ್ಟೆಂಬರ್ 2025 ರಲ್ಲೇ ಮತ್ತು ಭೂಗತ ಭಾಗವನ್ನು ಜೂನ್ 2026 ರೊಳಗೆ ಪೂರ್ಣಗೊಳಿಸಲು ಉದ್ದೇಶಿಸಲಾಗಿತ್ತು. ಆದರೆ ಕಾಮಗಾರಿಯಲ್ಲಿ ಸ್ವಲ್ಪ ವಿಳಂಬವಾಗಿದೆ.
ವೆಚ್ಚದಲ್ಲಿ ಭಾರೀ ಏರಿಕೆ:
ಬಿಎಂಆರ್ಸಿಎಲ್ (BMRCL) ದಾಖಲೆ ಪ್ರಕಾರ, ಮೊದಲ ಹಂತದ ವೆಚ್ಚ 2005 ರಲ್ಲಿ 6,395 ಕೋಟಿ ರೂ. ಇಂದ 14,133 ಕೋಟಿ ರೂ.ಗೆ ಏರಿಕೆಯಾಗಿದೆ. ಎರಡನೇ ಹಂತದ ವೆಚ್ಚ 2014 ರಲ್ಲಿ 26,405 ಕೋಟಿ ರೂ. ಇಂದ 2024 ರಲ್ಲಿ 40,614 ಕೋಟಿ ರೂ.ಗೆ ಏರಿದೆ.
ಪ್ರಸ್ತುತ ಹಂತ-2 ನಲ್ಲಿ ಅನುಮೋದಿತ 72.095 ಕಿ.ಮೀ ಉದ್ದದ ಮಾರ್ಗಗಳಲ್ಲಿ ಈಗಾಗಲೇ 53.8 ಕಿ.ಮೀ ಕಾರ್ಯಾರಂಭಗೊಂಡಿದೆ. 2025 ಜೂನ್ ಅಂತ್ಯದ ವೇಳೆಗೆ, ಕಾಮಗಾರಿಯ ಭೌತಿಕ ಪ್ರಗತಿ 94.50% ಹಾಗೂ ಆರ್ಥಿಕ ಪ್ರಗತಿ 91.66% ಆಗಿದೆ.
ಹಂತ 3ಎ: ಹೆಬ್ಬಾಳ-ಸರ್ಜಾಪುರ ಮಾರ್ಗ:
ಸರ್ಜಾಪುರದಿಂದ ಹೆಬ್ಬಾಳದವರೆಗೆ 36.58 ಕಿ.ಮೀ ಉದ್ದದ ಹಂತ 3ಎ ಕಾರಿಡಾರ್ಗೆ ₹28,405 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮಾರ್ಗದ ವಿವರವಾದ ಯೋಜನಾ ವರದಿ (DPR) ರಾಜ್ಯ ಸರ್ಕಾರಕ್ಕೆ ವೆಚ್ಚ ಪರಿಶೀಲನೆಗಾಗಿ ಹಿಂತಿರುಗಿಸಲಾಗಿದೆ.
ಕೇಂದ್ರ ಸಚಿವಾಲಯ ರಾಜ್ಯ ಸರ್ಕಾರವನ್ನು ಈ ಪರಿಶೀಲನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಅನುಮೋದನೆಗಾಗಿ ಮರು ಸಲ್ಲಿಸುವಂತೆ ಒತ್ತಾಯಿಸಿದೆ. ಜೊತೆಗೆ, ಭವಿಷ್ಯದ ಮೆಟ್ರೋ ವಿಸ್ತರಣೆಗೆ ದೀರ್ಘಾವಧಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲು ಸೂಚಿಸಿದೆ.
ಹಂತ 2A ಮತ್ತು 2B ಪ್ರಗತಿ:
ಹಂತ 2A (ಸೆಂಟ್ರಲ್ ಸಿಲ್ಕ್ ಬೋರ್ಡ್-ಕೆಆರ್ಪುರ, 19.75 ಕಿ.ಮೀ) ಹಾಗೂ ಹಂತ 2B (ಕೆಆರ್ಪುರ-ಹೆಬ್ಬಾಳ-ವಿಮಾನ ನಿಲ್ದಾಣ, 38.4 ಕಿ.ಮೀ) ಒಟ್ಟುಗೂ 58.19 ಕಿ.ಮೀ ಉದ್ದವಿದ್ದು, ₹14,788.10 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. 2025 ಜೂನ್ ವೇಳೆಗೆ, ಭೌತಿಕ ಪ್ರಗತಿ 52.5% ಹಾಗೂ ಆರ್ಥಿಕ ಪ್ರಗತಿ 55.8% ಆಗಿದೆ.
ಹಂತ 3 ಕಾಮಗಾರಿಯ ಆರಂಭ:
ಒಟ್ಟು 44.6 ಕಿ.ಮೀ ಉದ್ದದ ಹಂತ 3 ಕಾಮಗಾರಿ ₹15,611 ಕೋಟಿ ವೆಚ್ಚದಲ್ಲಿ ನಡೆಯಲಿದೆ. 2025 ಆಗಸ್ಟ್ 10 ರಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಹಂತದಲ್ಲಿ ಜೆ.ಪಿ. ನಗರ 4ನೇ ಹಂತದಿಂದ ಕೆಂಪಾಪುರದವರೆಗೆ 32.1 ಕಿ.ಮೀ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ 12.5 ಕಿ.ಮೀ ಮಾರ್ಗಗಳು ಸೇರಿವೆ.
ಇತ್ತೀಚೆಗೆ ಪ್ರಾರಂಭವಾದ ಪ್ರಮುಖ ಮಾರ್ಗಗಳು:
- ರೀಚ್-1 ವಿಸ್ತರಣೆ: ಕೃಷ್ಣರಾಜಪುರಂ-ವೈಟ್ಫೀಲ್ಡ್ (13.7 ಕಿ.ಮೀ) – ಮಾರ್ಚ್ 25, 2023
- ಬೈಯಪ್ಪನಹಳ್ಳಿ-ಕೃಷ್ಣರಾಜಪುರಂ (2 ಕಿ.ಮೀ) – ಅಕ್ಟೋಬರ್ 9, 2023
- ಮೈಸೂರು ರಸ್ತೆ-ಕೆಂಗೇರಿ (7.53 ಕಿ.ಮೀ) – ಆಗಸ್ಟ್ 29, 2021
- ಕೆಂಗೇರಿ-ಚಲ್ಲಘಟ್ಟ (2 ಕಿ.ಮೀ) – ಅಕ್ಟೋಬರ್ 9, 2023
- ನಾಗಸಂದ್ರ-ಮಾದವರ (3.14 ಕಿ.ಮೀ) – ನವೆಂಬರ್ 17, 2024
- ಯಲಚೇನಹಳ್ಳಿ-ಸಿಲ್ಕ್ ಇನ್ಸ್ಟಿಟ್ಯೂಟ್ (6 ಕಿ.ಮೀ) – ಜನವರಿ 14, 2021
- ಆರ್ವಿ ರಸ್ತೆ-ಬೊಮ್ಮಸಂದ್ರ ಹಳದಿ ಮಾರ್ಗ (19 ಕಿ.ಮೀ) – ಆಗಸ್ಟ್ 10, 2025
2014ರಿಂದ ಇಂದಿನವರೆಗೆ ಬಿಎಂಆರ್ಸಿಎಲ್ಗೆ ಒಟ್ಟಾರೆ 27,209 ಕೋಟಿ ರೂ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. 2024-25ರಲ್ಲಿ 2,217 ಕೋಟಿ ರೂ. ಹಂಚಿಕೆ ಮಾಡಲಾಗಿದ್ದು, ಅದರಲ್ಲಿ 544 ಕೋಟಿ ರೂ. ಈಗಾಗಲೇ ಬಿಡುಗಡೆ ಮಾಡಲಾಗಿದೆ. ಬಾಕಿ ನಿಧಿ ಬೇಡಿಕೆಗಳಿಲ್ಲದೆ, ಸಮಯಕ್ಕೆ ಸರಿಯಾಗಿ ಹಣ ವಿತರಣೆಯಾಗಿದೆ.
