ಬೆಂಗಳೂರು: ದೀರ್ಘಕಾಲದಿಂದ ಅಲಕ್ಷಿತವಾಗಿದ್ದ ನಿಲಂಬೂರು-ನಂಜನಗೂಡು ರೈಲು ಮಾರ್ಗ ಯೋಜನೆಗೆ ಇದೀಗ ಮರುಜೀವ ಸಿಕ್ಕಿದೆ. ರೈಲ್ವೆ ಇಲಾಖೆ ಈ ಯೋಜನೆಗಾಗಿ ಕಾರ್ಯಸಾಧ್ಯತಾ ಅಧ್ಯಯನವನ್ನು ಕೈಗೆತ್ತಿಕೊಂಡಿದೆ.
236 ಕಿಲೋಮೀಟರ್ ಉದ್ದದ ಈ ಮಹತ್ವಾಕಾಂಕ್ಷಿ ರೈಲು ಮಾರ್ಗವು ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳನ್ನು ಸಂಪರ್ಕಿಸುವುದು ವಿಶೇಷ. ಈ ಮಾರ್ಗವು ಕರ್ನಾಟಕದ ಬಂಡೀಪುರ, ತಮಿಳುನಾಡಿನ ಮಧುಮಲೆ, ಹಾಗೂ ಕೇರಳದ ವಯನಾಡು ಸಂರಕ್ಷಿತ ಅರಣ್ಯ ಪ್ರದೇಶಗಳ ಮೂಲಕ ಹಾದು ಹೋಗಲಿದೆ.
ಪ್ರಕೃತಿ ಸಂರಕ್ಷಣಾ ಪ್ರದೇಶಗಳ ಮೂಲಕ ರೈಲು ಮಾರ್ಗ ಹಾದು ಹೋಗುತ್ತಿರುವುದರಿಂದ ಪರಿಸರ ಅನುಮತಿ ಹಾಗೂ ಇತರ ಕಾನೂನು ಸಂಬಂಧಿ ವಿಚಾರಗಳು ಪ್ರಮುಖ ಅಡೆತಡೆಗಳಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆ ಯಶಸ್ವಿಯಾಗಿ ಜಾರಿಗೆ ಬಂದರೆ, ಮೂರು ರಾಜ್ಯಗಳ ನಡುವಿನ ಸಾರಿಗೆ ಸಂಪರ್ಕ ಸುಗಮವಾಗುವುದರ ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ದೊರೆಯುವ ಸಾಧ್ಯತೆ ಇದೆ.
