ಬೆಂಗಳೂರು: ರಾಜ್ಯದ 442 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಿಲ್ಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂಕಷ್ಟಕ್ಕೊಳಗಾಗಿದ್ದಾರೆ. ಯುಜಿಸಿ (UGC) ಮತ್ತು ನಾನ್ ಯುಜಿಸಿ ಅರ್ಹತೆಯ ಗೊಂದಲದಿಂದ ಅತಿಥಿ ಉಪನ್ಯಾಸಕರ ನೇಮಕ ಪ್ರಕ್ರಿಯೆಯಲ್ಲಿ ಸರ್ಕಾರ ಹಿಂದೇಟು ಹಾಕುತ್ತಿದೆ.
ಮಾನ್ಯ ಹೈಕೋರ್ಟ್, ಏಕ-ಸದಸ್ಯ ಮತ್ತು ದ್ವಿ-ಸದಸ್ಯ ಪೀಠಗಳು ಮಧ್ಯಂತರ ಆದೇಶ ನೀಡಿದ್ದು, ಅತಿಥಿ ಉಪನ್ಯಾಸಕರನ್ನು ಕೇವಲ ಯುಜಿಸಿ ಅರ್ಹತೆಯವರು ನೇಮಕವಾಗಬೇಕು ಎಂದು ಸೂಚಿಸಿದ್ದು, ಆದರೂ ಸರ್ಕಾರ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಥಮ ದರ್ಜೆ ಕಾಲೇಜುಗಳು ಪ್ರಾರಂಭಗೊಂಡಿದ್ದು ಸುಮಾರು ಎರಡು ತಿಂಗಳು ಕಳೆದರೂ ವಿದ್ಯಾರ್ಥಿಗಳಿಗೆ ಪಾಠ ಕಲಿಕೆ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ.
ಕಾಲೇಜು ಶಿಕ್ಷಣ ಇಲಾಖೆ ವರದಿ ಪ್ರಕಾರ, ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 10,000 ಅತಿಥಿ ಉಪನ್ಯಾಸಕರ ಅವಶ್ಯಕತೆ ಇದೆ. ಇದರಲ್ಲಿ ಯುಜಿಸಿ ಅರ್ಹತೆ ಪಡೆದ ಅಭ್ಯರ್ಥಿಗಳ ಸಂಖ್ಯೆ 20,000ಕ್ಕೂ ಹೆಚ್ಚು. ಈ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಸೂಕ್ತ ಕ್ರಮ ತೆಗೆದುಕೊಂಡು, ಹೈಕೋರ್ಟ್ ಮಧ್ಯಂತರ ತೀರ್ಪಿನಂತೆ ಅತಿಥಿ ಉಪನ್ಯಾಸಕರ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಆಗ್ರಹಿಸಲಾಗಿದೆ.
ವಿದ್ಯಾರ್ಥಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಶೈಕ್ಷಣಿಕ ವರ್ಷವೂ ಅಡಚಣೆಗೆ ಒಳಗಾಗುವ ಭಯ ವ್ಯಕ್ತಪಡಿಸಿದ್ದಾರೆ.
