ಬೆಂಗಳೂರು, ಸೆ.1 : ರಾಜ್ಯದ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ (PDO) ವರ್ಗಾವಣೆ ಪ್ರಕ್ರಿಯೆಯನ್ನು ಆನ್ಲೈನ್ ಕೌನ್ಸಿಲಿಂಗ್ ಮೂಲಕ ಪಾರದರ್ಶಕವಾಗಿ ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ತೀರ್ಮಾನಿಸಿದ್ದು, ಸೆಪ್ಟೆಂಬರ್ 10ರಿಂದ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿರುವ ಎಲ್ಲಾ PDO ಗಳನ್ನು ಕಡ್ಡಾಯವಾಗಿ ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೊಳಿಸಲಾಗುವುದು ಎಂದರು. ಈ ಕೌನ್ಸಿಲಿಂಗ್ ಪ್ರಕ್ರಿಯೆ ಸೆ.10ರಿಂದ 20ರವರೆಗೆ ಕಡ್ಡಾಯ ವರ್ಗಾವಣೆ, ಹಾಗೂ ಸೆ.23 ಮತ್ತು 24ರಂದು ಸಾಮಾನ್ಯ ಕೋರಿಕೆ ವರ್ಗಾವಣೆಗಾಗಿ ನಡೆಯಲಿದೆ.
ಈಗಾಗಲೇ ವಿಶೇಷ ಪ್ರಕರಣಗಳ ಅಡಿಯಲ್ಲಿ 515 ಅರ್ಜಿಗಳು ಮತ್ತು ಸಾಮಾನ್ಯ ಕೋರಿಕೆಯ ಅಡಿಯಲ್ಲಿ 1215 ಅರ್ಜಿಗಳು ಸೇರಿದಂತೆ ಒಟ್ಟು 1730 ಅರ್ಜಿಗಳು ಸ್ವೀಕರಿಸಲಾಗಿದೆ. ಅರ್ಹತೆ ಹೊಂದಿದವರ ಅಂತಿಮ ಪಟ್ಟಿಯನ್ನು ಹಾಗೂ ಖಾಲಿ ಹುದ್ದೆಗಳ ವಿವರಗಳನ್ನು https://rdprtransfer.karnataka.gov.in ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಸೆ.3ರಿಂದ 8ರವರೆಗೆ ವಿಶೇಷ ಪ್ರಕರಣಗಳ ಮೊದಲ ಹಂತದ ಕೌನ್ಸಿಲಿಂಗ್ ಮತ್ತು ಸೆ.8ರಂದು ಎರಡನೇ ಹಂತದ ಕೌನ್ಸಿಲಿಂಗ್ ನಡೆಯಲಿದೆ ಎಂದು ಅವರು ಹೇಳಿದರು.
“ಗ್ರಾಮೀಣಾಭಿವೃದ್ಧಿ ಇಲಾಖೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ PDO ವರ್ಗಾವಣೆ ಪ್ರಕ್ರಿಯೆಯನ್ನು ಆನ್ಲೈನ್ ಕೌನ್ಸಿಲಿಂಗ್ ಮೂಲಕ ಪಾರದರ್ಶಕವಾಗಿ ಕೈಗೊಳ್ಳಲಾಗುತ್ತಿದ್ದು, ಇದು ಆಡಳಿತ ದಕ್ಷತೆ ಹೆಚ್ಚಿಸಲು ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ನೆರವಾಗಲಿದೆ,” ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
