ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸೆಕ್ಯುರಿಟಿ ಚೆಕಿಂಗ್ ಪಾಯಿಂಟ್ ಬಳಿ ಸಂಭವಿಸಿದ ಕಾರುಗಳ ನಡುವೆ ಸಂಭವಿಸಿದ ಭಾರೀ ಡಿಕ್ಕಿಯಿಂದ ಪ್ರಯಾಣಿಕರಲ್ಲಿ ಒಂದಿಷ್ಟು ಗಾಬರಿ ವಾತಾವರಣ ಉಂಟಾಯಿತು. ಆದರೆ ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸದೇ ದೊಡ್ಡ ದುರಂತ ತಪ್ಪಿದೆ.
ಮುನ್ಸಾಗುತ್ತಿದ್ದ ಕಾರು ಅಚಾನಕ್ ಬ್ರೇಕ್ ಹಾಕಿದ ಪರಿಣಾಮ ಹಿಂದಿನಿಂದ ಬಂದ ಮತ್ತೊಂದು ಕಾರು ವೇಗದಲ್ಲಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಎರಡೂ ಕಾರುಗಳ ಮುಂಭಾಗ ಹಾಗೂ ಹಿಂಬಾಗ ನಜ್ಜುಗುಜ್ಜಾಗಿದ್ದು, ವಾಹನಗಳಿಗೆ ಹೆಚ್ಚಿನ ಪ್ರಮಾಣದ ಹಾನಿ ಸಂಭವಿಸಿದೆ.
ಅಪಘಾತದ ಸಮಯದಲ್ಲಿ ಕಾರಿನಲ್ಲಿ ಇದ್ದ ಪ್ರಯಾಣಿಕರು ಸೀಟ್ಬೆಲ್ಟ್ ಧರಿಸಿದ್ದರಿಂದ ಅಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ದೇವನಹಳ್ಳಿ ಸಂಚಾರಿ ಪೊಲೀಸ್ ಸಿಬ್ಬಂದಿ ಧಾವಿಸಿದ್ದು, ಟ್ರಾಫಿಕ್ ನಿಯಂತ್ರಣ ಕಾರ್ಯಾಚರಣೆ ಕೈಗೊಂಡಿದ್ದಾರೆ.
ವಿಮಾನ ನಿಲ್ದಾಣದ ಒಳಹೊಕ್ಕ ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯ ಹೆಚ್ಚಳ ಮತ್ತು ತ್ವರಿತ ಗತಿಯೇ ಇಂತಹ ಘಟನೆಗಳಿಗೆ ಕಾರಣವಾಗುತ್ತಿರುವುದಾಗಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆದಿದೆ.

