ಬೆಂಗಳೂರು ನಗರದ ಹೋಟೆಲ್ಗಳು ಶೀಘ್ರದಲ್ಲೇ ಹೊಸ ನಿಯಮ ಜಾರಿಗೆ ತರುವ ಚಿಂತನೆ ನಡೆಸುತ್ತಿದ್ದು, ಇದರಿಂದ ಗ್ರಾಹಕರ ಬಿಲ್ ಹೆಚ್ಚಾಗುವ ಸಾಧ್ಯತೆ ಇದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ವಸ್ತುಗಳ ಬೆಲೆ ಏರಿಕೆಯ ಪರಿಣಾಮವಾಗಿ ಈಗಾಗಲೇ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗಿರುವ ಬೆನ್ನಲ್ಲೇ, ಇದೀಗ ಮತ್ತೊಂದು ಕಾರಣಕ್ಕೆ ಹೋಟೆಲ್ಗಳು ಬೆಲೆ ಪರಿಷ್ಕರಣೆಗೆ ಮುಂದಾಗಿವೆ.
ಬೆಂಗಳೂರಿನಾದ್ಯಂತದ ಕೆಲವು ಹೋಟೆಲ್ಗಳು, ಕಡಿಮೆ ಬೆಲೆಯ ಆಹಾರ ಆರ್ಡರ್ ಮಾಡಿ ದೀರ್ಘಕಾಲ ಟೇಬಲ್ಗಳಲ್ಲಿ ಕುಳಿತುಕೊಳ್ಳುವ ಗ್ರಾಹಕರಿಗೆ ‘ಟೇಬಲ್ ಶುಲ್ಕ’ ವಿಧಿಸುವ ಬಗ್ಗೆ ಚಿಂತನೆ ನಡೆಸಿವೆ. ಹೋಟೆಲ್ಗಳ ಸೀಮಿತ ಆಸನ ಸಾಮರ್ಥ್ಯ ಹಾಗೂ ಆದಾಯ ನಷ್ಟವನ್ನು ತಪ್ಪಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲು ಮುಂದಾಗಿರುವುದಾಗಿ ಹೋಟೆಲ್ ಮಾಲೀಕರು ಹೇಳುತ್ತಿದ್ದಾರೆ.
ಕೆಲವು ಗ್ರಾಹಕರು ಒಂದು ಕಪ್ ಚಹಾ, ಕಾಫಿ ಅಥವಾ ಅಲ್ಪ ಉಪಹಾರವನ್ನು ಮಾತ್ರ ಆರ್ಡರ್ ಮಾಡಿ, ತಾಸುಗಳ ಕಾಲ ಹೋಟೆಲ್ ಟೇಬಲ್ ಬಳಕೆ ಮಾಡುತ್ತಿರುವುದು ಸಾಮಾನ್ಯವಾಗಿದ್ದು, ಇದರಿಂದ ಇತರ ಗ್ರಾಹಕರಿಗೆ ಆಸನ ಸಿಗದ ಪರಿಸ್ಥಿತಿ ಉಂಟಾಗುತ್ತಿದೆ. ಇದರ ಪರಿಣಾಮವಾಗಿ ಕೆಲವರು ಬೇರೆ ಹೋಟೆಲ್ಗಳಿಗೆ ತೆರಳಬೇಕಾದ ಸ್ಥಿತಿಯೂ ಎದುರಾಗುತ್ತಿದೆ ಎನ್ನಲಾಗಿದೆ.
ಬೆಂಗಳೂರು ಹೋಟೆಲ್ ಮಾಲೀಕರ ಸಂಘದಲ್ಲಿ ಈ ಪ್ರಸ್ತಾವನೆ ಪ್ರಸ್ತುತ ಚರ್ಚೆಯ ಹಂತದಲ್ಲಿದ್ದು, ಪೀಕ್ ಅವರ್ಗಳಲ್ಲಿ ಈ ಸಮಸ್ಯೆ ಹೆಚ್ಚು ತೀವ್ರವಾಗುತ್ತಿದೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಊಟದ ಸಮಯದಲ್ಲಿ ದೀರ್ಘಕಾಲ ಕುಳಿತುಕೊಳ್ಳುವ ಗ್ರಾಹಕರಿಂದ ಆಸನ ಸಮಸ್ಯೆ ಉಂಟಾಗಿ, ಹೋಟೆಲ್ಗಳ ವಹಿವಾಟು ಮತ್ತು ಆದಾಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ, ಕಡಿಮೆ ಮೊತ್ತದ ಆಹಾರ ಸೇವಿಸಿ ದೀರ್ಘಕಾಲ ಹೋಟೆಲ್ನಲ್ಲಿ ತಂಗುವ ಗ್ರಾಹಕರಿಗೆ ಟೇಬಲ್ ಶುಲ್ಕ ನಿಗದಿ ಮಾಡುವ ಕುರಿತು ಹೋಟೆಲ್ ಮಾಲೀಕರು ಚಿಂತನೆ ನಡೆಸಿದ್ದು, ಈ ವಿಚಾರದಲ್ಲಿ ಕರ್ನಾಟಕ ಸರ್ಕಾರವೂ ಮಧ್ಯ ಪ್ರವೇಶ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಹೊಸ ನಿಯಮ ಜಾರಿಗೆ ಬಂದಲ್ಲಿ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಭಾರ ಬೀಳುವ ಆತಂಕ ವ್ಯಕ್ತವಾಗಿದ್ದು, ಈ ವಿಷಯವು ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.