ಬೆಂಗಳೂರು: ಅಭಿಮಾನ ಸ್ಟುಡಿಯೋನಲ್ಲಿದ್ದ ದಿವಂಗತ ನಟ ವಿಷ್ಣುವರ್ಧನ್ ಅವರ ಸಮಾಧಿ ಧ್ವಂಸಗೊಂಡ ಘಟನೆ ಸಿನಿಮಾ ವಲಯ ಮತ್ತು ಅಭಿಮಾನಿಗಳಲ್ಲಿ ಆಕ್ರೋಶ ಮೂಡಿಸಿದೆ. ದಶಕಕ್ಕೂ ಹೆಚ್ಚು ಕಾಲ ಸ್ಮಾರಕ ನಿರ್ಮಾಣ ವಿಚಾರದಲ್ಲಿ ಹೋರಾಟ ಮುಂದುವರಿದಿದ್ದರೂ ಫಲ ಸಿಗದಿರುವ ಹಿನ್ನೆಲೆಯಲ್ಲಿ, ಸ್ಟಾರ್ ನಟ ಸುದೀಪ್ ತಮ್ಮ ಬೇಸರವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
“ವಿಷ್ಣು ಸರ್ ಸಮಾಧಿಗೆ ಏನಾಯಿತು ಅದು ನಡೆಯಬಾರದಿತ್ತು. ಅಧಿಕಾರಿಗಳ ಸಣ್ಣ ಪ್ರಯತ್ನವೂ ಈ ಘಟನೆಯನ್ನು ತಪ್ಪಿಸಬಹುದಾಗಿತ್ತು,” ಎಂದು ಸುದೀಪ್ ಹೇಳಿದ್ದಾರೆ. “ಇನ್ನು ಮುಂದೆ ಭಿಕ್ಷೆ ಬೇಡುವ ಅವಶ್ಯಕತೆ ಇಲ್ಲ. ಮಾಡಬೇಕೆಂದಿದ್ದರೆ ಇಷ್ಟು ಹೊತ್ತಿಗೇ ಮಾಡುತ್ತಿದ್ದರು. ಈಗ ಅದು ಮುಗಿದ ಕತೆ; ಮುಂದೆ ಏನು ಮಾಡಬೇಕು ಎಂಬುದರ ಕಡೆ ಗಮನ ಹರಿಸೋಣ,” ಎಂದಿದ್ದಾರೆ.
ಸುದೀಪ್, ವೀರಕಪುತ್ರ ಶ್ರೀನಿವಾಸ್ ಜೊತೆ ಮಾತುಕತೆ ನಡೆಸಿ, ಶೀಘ್ರದಲ್ಲೇ ದೊಡ್ಡ ಪ್ರತಿಮೆ ನಿರ್ಮಿಸಲು ಯೋಜನೆ ಹಾಕಿಕೊಂಡಿರುವುದನ್ನು ತಿಳಿಸಿದ್ದಾರೆ. “ಆ ಪ್ರತಿಮೆ ನಿರ್ಮಾಣಕ್ಕೆ ನಾನು ಕೈಲಾದ ಸಹಾಯ ಮಾಡುತ್ತೇನೆ,” ಎಂದಿದ್ದಾರೆ.
“ಎಲ್ಲರಿಗೂ ನೋವಾಗಿದೆ. ರಾತ್ರೋರಾತ್ರಿ ಹೀಗೆ ಮಾಡುವುದು ಹೇಡಿತನ. ನೋವು ಇದ್ದರೂ ಅದರಿಂದ ಹೊರಬಂದು ಮುಂದಿನ ಹೆಜ್ಜೆ ಹಾಕಬೇಕು,” ಎಂದು ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.
