ಬೆಂಗಳೂರು, 10 ಏಪ್ರಿಲ್ 2026: ಭಾರತದ ಅತಿದೊಡ್ಡ ಅಮ್ಯೂಸ್ ಮೆಂಟ್ ಪಾರ್ಕ್ ಸರಣಿಯಾದ ‘ ವಂಡರ್ಲಾ ಬೆಂಗಳೂರು ಇದೀಗ ಹೊಚ್ಚ ಹೊಸತಾಗಿ ‘ಗರುಡ ಗ್ಲೈಡ್’ ಎಂಬ ಅತ್ಯಾಧುನಿಕ ರೋಲರ್ ಕೋಸ್ಟರ್ ಅನ್ನು ಅನಾವರಣ ಮಾಡಿದೆ. ಕರ್ನಾಟಕದ ಮೊದಲ ‘ಇನ್ವರ್ಟೆಡ್ ರೋಲರ್ ಕೋಸ್ಟರ್’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ರೈಡ್ ಸಸ್ಪೆಂಡೆಡ್ ಲೂಪಿಂಗ್ ಕೋಸ್ಟರ್ ಆಗಿದ್ದು, ರೋಲರ್ ಕೋಸ್ಟರ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ವಿಶ್ವದ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ನೆದರ್ ಲ್ಯಾಂಡ್ಸ್ ನ ಸುಪ್ರಸಿದ್ಧ ವೆಕೋಮಾ’ ಸಂಸ್ಥೆ ವಿನ್ಯಾಸಗೊಳಿಸಿದೆ.
ಈ ನೂತನ ರೈಡ್ ಸೇರ್ಪಡೆ ಮೂಲಕ ವಂಡರ್ಲಾ ಬೆಂಗಳೂರು, ಎರಡು ಬೃಹತ್ ಇನ್ವರ್ಷನ್ (ತಲೆಕೆಳಗಾಗುವ) ರೋಲರ್ ಕೋಸ್ಟರ್ ರೈಡ್ ಗಳನ್ನು (ರಿಕಾಯಿಲ್ ಮತ್ತು ಗರುಡ ಗ್ಲೈಡ್) ಹೊಂದಿರುವ ” ಭಾರತದ ಏಕೈಕ ಅಮ್ಯೂಸ್ ಮೆಂಟ್ ಪಾರ್ಕ್ ಎಂಬ ದಾಖಲೆ ಬರೆದಿದೆ. ಗಾಳಿಯಲ್ಲಿ ತೂಗಾಡುತ್ತಾ ವೇಗದಲ್ಲಿ ಸಾಗುವ ಈ ರೈಡ್, ಪ್ರವಾಸಿಗರಿಗೆ ರೋಚಕ ಅನುಭವ ನೀಡಲಿದೆ.
ಈ ರೈಡ್ ಅಳವಡಿಕೆ ಮತ್ತು ಸಂಯೋಜನೆಯನ್ನು ವಂಡರ್ಲಾದ ಸ್ವಂತ ಇಂಜಿನಿಯರಿಂಗ್ ತಂಡವು ನಿರ್ವಹಿಸಿದ್ದು. ಅತ್ಯುನ್ನತ ಜಾಗತಿಕ ಸುರಕ್ಷತಾ ಮಾನದಂಡಗಳು ಮತ್ತು ನಿಖರತೆಯಿಂದ ಕಾರ್ಯನಿರ್ವಹಿಸಿವೆ. ಈ ಮಹತ್ವದ ಸಂದರ್ಭವನ್ನು ಸಂಭ್ರಮಿಸಲು ವಂಡರ್ಲಾ ಬೆಂಗಳೂರಿನಲ್ಲಿ ವಿಶೇಷ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಯೂಟ್ಯೂಬರ್ ‘ಡಾ.ಬ್ರೋ’ ಖ್ಯಾತಿಯ ಗಗನ್ ಶ್ರೀನಿವಾಸ್ ಮತ್ತು ಭಾರತೀಯ ಕ್ರಿಕೆಟ್ ತಾರೆ ಶ್ರೇಯಾಂಕ ಪಾಟೀಲ್ ಅವರು ಗರುಡ ಗ್ಲೈಡ್ ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವಂಡರ್ಲಾ ಹಾಲಿಡೇಸ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಎಂಡಿ ಅರುಣ್ ಕೆ. ಚಿತ್ತಿಲಪ್ಪಿಲ್ಲಿ, ಸಿಓಓ ಧೀರನ್ ಚೌಧರಿ ಹಾಗೂ ಬೆಂಗಳೂರು ಪಾರ್ಕ್ ಮುಖ್ಯಸ್ಥರು ರುದ್ರೇಶ್ ಹೆಚ್.ಎಸ್ ಉಪಸ್ಥಿತರಿದ್ದರು.
ಗರುಡ ಗ್ಲೈಡ್ ನ ಪ್ರಮುಖ ವಿಶೇಷತೆಗಳು:
● ಗುರುತ್ವಾಕರ್ಷಣೆಯನ್ನು ಸವಾಲು ಮಾಡುವ ಐದು ಇನ್ವರ್ಷನ್ ಗಳು: ರೈಡ್ ಮಾಡುವವರು ರೋಲ್ ಓವರ್, ವರ್ಟಿಕಲ್ ಲೂಪ್, ಸೈಡ್ ವೈಂಡರ್ ಮತ್ತು ಡಬಲ್ ಇನ್ ಲೈನ್ ಟ್ವಿಸ್ಟ್ ಗಳನ್ನು ಸತತವಾಗಿ ಅನುಭವಿಸುತ್ತಾರೆ. ಯಾವುದೇ ವಿರಾಮವಿಲ್ಲದೆ ಸಂಪೂರ್ಣ ರೋಮಾಂಚನ ನೀಡುವಂತೆ ವಿನ್ಯಾಸಗೊಳಿಸಲಾಗಿದೆ.
● ಸಸ್ಪೆಂಡೆಡ್ ಸೀಟಿಂಗ್ – ಹಾರುತ್ತಿರುವ ಅನುಭವ: ಇಲ್ಲಿ ಸವಾರರು ಹಳಿಯ ಕೆಳಗೆ ಕುಳಿತುಕೊಳ್ಳುತ್ತಾರೆ ಮತ್ತು ಅವರ ಕಾಲುಗಳು ಗಾಳಿಯಲ್ಲಿ ತೂಗಾಡುತ್ತಿರುತ್ತವೆ. ಇದು ಗಾಳಿಯಲ್ಲಿ ಹಾರುವ ರೋಚಕ ಅನುಭವವನ್ನು ನೀಡುವುದಲ್ಲದೆ, ಪ್ರತಿಯೊಂದು ತಿರುವು ಮತ್ತು ಪಲ್ಟಿಗಳಲ್ಲಿ ಮತ್ತಷ್ಟು ತೀವ್ರ ಅನುಭವ ಒದಗಿಸುತ್ತದೆ. ಇದರ ವಿಶೇಷ ವಿನ್ಯಾಸವು ವೇಗ ಮತ್ತು ಎತ್ತರಕ್ಕೆ ಸಾಗುವ ಭಾವ ಹೆಚ್ಚಿಸುವಂತೆ ಮೂಡಿಬಂದಿದೆ.
● ಅತಿ ವೇಗ ಮತ್ತು ಗರಿಷ್ಠ ಎತ್ತರ: ಸುಮಾರು 662 ಮೀಟರ್ ಗಳಷ್ಟು ಉದ್ದವಿರುವ ಸ್ಟೀಲ್ ಹಳಿಯ ಮೇಲೆ ಗಂಟೆಗೆ 80 ಕಿಮೀ ವೇಗದಲ್ಲಿ ಸಾಗುತ್ತಾ, 31 ಮೀಟರ್ ಎತ್ತರಕ್ಕೆ ಏರಬಹುದು. ಈ 130 ಸೆಕೆಂಡ್ ಗಳ ಪ್ರಯಾಣವು ಅದ್ಭುತ ರೋಚಕತೆಯಿಂದ ಕೂಡಿದೆ.
● ಯುರೋಪಿಯನ್ ಇಂಜಿನಿಯರಿಂಗ್ ಶ್ರೇಷ್ಠತೆ: ಇದನ್ನು ನೆದರ್ ಲ್ಯಾಂಡ್ಸ್ ನ ಪ್ರಸಿದ್ಧ ತಯಾರಕ ಸಂಸ್ಥೆಯಾದ ‘ವೆಕೋಮಾ’ ನಿರ್ಮಿಸಿದೆ. ಯುರೋಪ್ ನಿಂದ ತರಿಸಲಾದ ಘಟಕಗಳನ್ನು ಯುರೋಪಿಯನ್ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಜೋಡಿಸಲಾಗಿದ್ದು, ವಿಶ್ವದರ್ಜೆಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿದೆ.
● ಹೆಚ್ಚಿನ ಸಾಮರ್ಥ್ಯದ ಡ್ಯುಯಲ್-ಟ್ರೈನ್ ಸಿಸ್ಟಮ್: ಇಲ್ಲಿ ಎರಡು ರೈಲುಗಳು ಏಕಕಾಲದಲ್ಲಿ ಚಲಿಸುತ್ತವೆ. ಪ್ರತಿಯೊಂದೂ 14 ಸವಾರರನ್ನು (7 ಸಾಲುಗಳು × 2 ಸೀಟುಗಳು) ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದ್ದು, ಪ್ರತಿ ಗಂಟೆಗೆ ಸುಮಾರು 252 ಅತಿಥಿಗಳು ಈ ಸವಾರಿಯ ಅನುಭವ ಪಡೆಯಲು ಅನುವು ಮಾಡಿಕೊಡುತ್ತದೆ.
● ಬಹುಪದರದ ಸುರಕ್ಷತಾ ವಿನ್ಯಾಸ: ಸುಧಾರಿತ ಪಿ ಎಲ್ ಸಿ ಆಧಾರಿತ ರೈಡ್ ಕಂಟ್ರೋಲ್ ಸಿಸ್ಟಮ್, ಪ್ರತಿ ವಿಭಾಗದಲ್ಲೂ ಹೆಚ್ಚುವರಿ ಬ್ರೇಕಿಂಗ್ ವ್ಯವಸ್ಥೆ, ತುರ್ತು ಸಂದರ್ಭದಲ್ಲಿ ಸುರಕ್ಷಿತವಾಗಿ ಕೆಳಗಿಳಿಸಲು ಪರ್ಯಾಯ ವಿದ್ಯುತ್ ಸರಬರಾಜು ಮತ್ತು ದೈನಂದಿನ ತಪಾಸಣೆಗಳ ಮೂಲಕ ಅಂತರಾಷ್ಟ್ರೀಯ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.
● ಹೂಡಿಕೆ: ₹34 ಕೋಟಿ ಹೂಡಿಕೆ ಮಾಡಲಾಗಿದ್ದು, ಇದು ಭಾರತಕ್ಕೆ ವಿಶ್ವದರ್ಜೆಯ ಸಾಹಸಮಯ ಅನುಭವಗಳನ್ನು ತರುವ ವಂಡರ್ಲಾದ ಬದ್ಧತೆಗೆ ಸಾಕ್ಷಿಯಾಗಿದೆ.
‘ಗರುಡ ಗ್ಲೈಡ್’ ಕೇವಲ ಒಂದು ಹೊಸ ಆಕರ್ಷಣೆ ಮಾತ್ರವಲ್ಲ, ಅದೊಂದು ವಿಶಿಷ್ಟ ಮೈಲಿಗಲ್ಲಾಗಿದೆ. ಎಸ್ಎಲ್ಸಿ ಮಾದರಿಯು ಜಾಗತಿಕವಾಗಿ ಅತ್ಯಂತ ಜನಪ್ರಿಯವಾಗಿದ್ದು, ಸತತವಾದ ಇನ್ವರ್ಷನ್ ಗಳು ಮತ್ತು ದಿಕ್ಕಿನ ವೇಗದ ಬದಲಾವಣೆಗಳ ಮೂಲಕ ಅತ್ಯಂತ ತೀವ್ರವಾದ ಅನುಭವವನ್ನು ನೀಡುತ್ತದೆ. ಗರುಡ ಗ್ಲೈಡ್ ನ 130 ಸೆಕೆಂಡ್ ಗಳ ರೈಡ್ ಸೈಕಲ್ ಅನ್ನು ಸತತ ವೇಗವಾಗಿ ಸಾಗಲು ವಿನ್ಯಾಸಗೊಳಿಸಲಾಗಿದ್ದು, ಪ್ರಾರಂಭದಿಂದ ಅಂತ್ಯದವರೆಗೆ ಪ್ರತಿ ಕ್ಷಣವೂ ಅಡ್ರಿನಾಲಿನ್ ರಶ್ ನೀಡುತ್ತದೆ.
ಈ ಹೊಸ ರೈಡ್ ಕುರಿತು ಮಾತನಾಡಿದ ವಂಡರ್ಲಾ ಹಾಲಿಡೇಸ್ ಲಿಮಿಟೆಡ್ ನ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಎಂಡಿ ಅರುಣ್ ಕೆ. ಚಿತ್ತಿಲಪ್ಪಿಲ್ಲಿ ಅವರು, “ವಿಶ್ವದರ್ಜೆಯ ಅನುಭವಗಳನ್ನು ನೀಡುವ ವಂಡರ್ಲಾ ಬೆಂಗಳೂರಿನ ಪಯಣದಲ್ಲಿ ‘ಗರುಡ ಗ್ಲೈಡ್’ ಒಂದು ಮಹತ್ವದ ಕ್ಷಣವಾಗಿದೆ. ಕರ್ನಾಟಕದ ಮೊದಲ ಇನ್ವರ್ಟೆಡ್ ರೋಲರ್ ಕೋಸ್ಟರ್ ಆಗಿರುವ ಈ ಸಸ್ಪೆಂಡೆಡ್ ಲೂಪಿಂಗ್ ಕೋಸ್ಟರ್ ಒಂದು ಪ್ರಮುಖ ಮೈಲಿಗಲ್ಲಾಗಿದ್ದು, ಇದರ ಮೂಲಕ ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಗುಣಮಟ್ಟದ ಮಾನದಂಡಗಳನ್ನು ಎತ್ತರಿಸುವುದು ನಮ್ಮ ಗುರಿಯಾಗಿದೆ. ನಮ್ಮ ಹಲವು ರೋಚಕ ರೈಡ್ ಗಳ ಸಾಲಿಗೆ ಗರುಡ ಗ್ಲೈಡ್ ಸೇರ್ಪಡೆಯಾಗುವುದರೊಂದಿಗೆ, ಒಂದೇ ಪಾರ್ಕ್ ನಲ್ಲಿ ಎರಡು ಬೃಹತ್ ಇನ್ವರ್ಷನ್ ಕೋಸ್ಟರ್ಗಳನ್ನು ನೀಡುತ್ತಿರುವ ದೇಶದ ಮೊದಲ ಅಮ್ಯೂಸ್ ಮೆಂಟ್ ಪಾರ್ಕ್ ಎಂಬ ಹೆಗ್ಗಳಿಕೆಗೆ ನಾವು ಪಾತ್ರರಾಗಿದ್ದೇವೆ,” ಎಂದು ತಿಳಿಸಿದರು.
ಮಾತು ಮುಂದುವರಿಸಿದ ಅವರು, “ಈ ರೈಡ್ ಕೇವಲ ಇನ್ವರ್ಷನ್ ಗಳು (ತಲೆಕೆಳಗಾಗುವ ತಿರುವುಗಳು) ಮತ್ತು ವೇಗಕ್ಕೆ ಮಾತ್ರ ಸೀಮಿತವಾಗಿಲ್ಲ, ಇದು ಎಂಜಿನಿಯರಿಂಗ್ ಕಲಾತ್ಮಕತೆಯೂ ಹೌದು. ಅತ್ಯುನ್ನತ ಜಾಗತಿಕ ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದರ ಜೊತೆಗೆ ಸತತವಾದ ರೋಮಾಂಚನವನ್ನು ನೀಡುವ ರೈಡ್ ಇದಾಗಿದೆ. ನಮ್ಮ ಆಂತರಿಕ ಎಂಜಿನಿಯರಿಂಗ್ ತಂಡವು ಇದರ ಅಳವಡಿಕೆ ಮತ್ತು ಸಂಯೋಜನೆಯ ಪ್ರತಿಯೊಂದು ಹಂತದಲ್ಲೂ ಅತ್ಯಂತ ನಿಖರವಾಗಿ ಕೆಲಸ ಮಾಡಿದೆ. ಎಂದಿನಂತೆ, ವಿನ್ಯಾಸದಿಂದ ಹಿಡಿದು ದೈನಂದಿನ ಕಾರ್ಯಾಚರಣೆಯವರೆಗೆ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆಯಾಗಿದೆ. ವೆಕೋಮಾ ಸಂಸ್ಥೆಯ ಈ ಅದ್ಭುತ ಸೃಷ್ಟಿಯನ್ನು ಬೆಂಗಳೂರಿಗೆ ತಂದಿರುವುದಕ್ಕೆ ನಮಗೆ ಹೆಮ್ಮೆಯಿದೆ ಮತ್ತು ನಮ್ಮ ಅತಿಥಿಗಳು ‘ಗರುಡ ಗ್ಲೈಡ್’ ನ ವೇಗ ಮತ್ತು ಸಂಭ್ರಮವನ್ನು ಅನುಭವಿಸುವುದನ್ನು ನೋಡಲು ನಾವು ಕಾತರರಾಗಿದ್ದೇವೆ” ಎಂದರು.
ಪಾರ್ಕ್ ಗೆ ಸಂಬಂಧಿಸಿದ ಎಲ್ಲಾ ವಿಶೇಷ ಕೊಡುಗೆಗಳು ವಂಡರ್ಲಾದ ಆನ್ ಲೈನ್ ಬುಕಿಂಗ್ ಪೋರ್ಟಲ್ನಲ್ಲಿ ಲಭ್ಯವಿವೆ. ವಿವರಗಳು ಈ ಕೆಳಗಿನಂತಿವೆ:
● ಬೆಂಗಳೂರು ಪಾರ್ಕ್ – ಆನ್ ಲೈನ್ ಬುಕಿಂಗ್ ಪೋರ್ಟಲ್: https://bookings.wonderla.com/ |
ಸಂಪರ್ಕಿಸಿ – +91 80372 30333, +91 9945557777
