
ಅಧ್ಯಾಯ-1
ಶ್ಲೋಕ – 15
ಪೌಂಡ್ರಂ ದಧ್ಮೌ ಮಹಾ ಶಂಖಂ ಭೀಮಕರ್ಮಾ ವೃಕೋದರಃ ॥೧೫॥
ಪಾಂಚಜನ್ಯಮ್ ಹೃಷೀಕ ಈಶಃ ದೇವದತ್ತಮ್ ಧನಂಜಯಃ ಪೌಂಡ್ರಮ್ ದಧ್ಮೌ ಮಹಾಶಂಖಮ್ ಭೀಮಕರ್ಮಾ ವೃಕ ಉದರಃ –
ಶ್ರೀಕೃಷ್ಣನು ಪಾಂಚಜನ್ಯವನ್ನು, ಅರ್ಜುನನು ದೇವದತ್ತವನ್ನು, ಪೌಂಡ್ರ ಎನ್ನುವ ಮಹಾ ಶಂಖವನ್ನು ಭೀಮನು ಊದಿದನು.
ಪಾಂಡವರ ಕಡೆಯಿಂದ ಮೊತ್ತಮೊದಲಿಗೆ ಶ್ರೀಕೃಷ್ಣ ತನ್ನ ಶಂಖವನ್ನು ಮೊಳಗಿಸುತ್ತಾನೆ. ಶ್ರೀಕೃಷ್ಣನ ಶಂಖದ ಹೆಸರು ಪಾಂಚಜನ್ಯ. ಈ ‘ಪಾಂಚಜನ್ಯ’ ಶಂಖದ ಹಿಂದೆ ಒಂದು ಕಥೆಯಿದೆ. ಶ್ರೀಕೃಷ್ಣ ತನ್ನ ವಿದ್ಯಾಭ್ಯಾಸವನ್ನು ಮಾಡಿದ್ದು ಸಾಂದೀಪನಿ ಮುನಿಯ ಆಶ್ರಮದಲ್ಲಿ. ವಿದ್ಯಾಭಾಸ ಮುಗಿಸಿ ಹಿಂತಿರುಗುವ ಸಮಯದಲ್ಲಿ ಶಿಷ್ಯರು ಗುರುದಕ್ಷಿಣೆ ಕೊಡುವುದು ಸಾಮಾನ್ಯ. ಇಲ್ಲಿ ಕೃಷ್ಣ ತನ್ನ ಗುರುವಿಗೆ ಕೊಟ್ಟ ಗುರುದಕ್ಷಿಣೆ ಬಹಳ ವಿಶಿಷ್ಟವಾದುದು. ‘ಪಾಂಚಜನ‘ ಎನ್ನುವ ಅಸುರ ಸಾಂದೀಪನಿ ಮುನಿಯ ಪುತ್ರನನ್ನು ಕೊಂದಿದ್ದ. ತನ್ನ ವಿದ್ಯಾಭಾಸ ಮುಗಿದು ಹಿಂದಿರುಗುವ ಸಮಯದಲ್ಲಿ ಕೃಷ್ಣ ಗುರುದಂಪತಿಗಳಿಗೆ ಗುರುದಕ್ಷಣೆಯಾಗಿ ಅವರ ಪುತ್ರನನ್ನೇ ಮರಳಿಸಿದ. ಆ ಪಾಂಚಜನ ಎನ್ನುವ ರಾಕ್ಷಸನಿದ್ದ ಶಂಖವೇ ಪಾಂಚಜನ್ಯ. ಪಾಂಚಜನ್ಯ-ಅಸುರ ಸಂಹಾರಕ ಹಾಗು ಜ್ಞಾನಾನಂದದ ಸಂಕೇತ.
ಕೃಷ್ಣನ ಶಂಖ ನಾದದ ಬೆನ್ನಿಗೆ ಅರ್ಜುನ ತನ್ನ ‘ದೇವದತ್ತ‘ ಎನ್ನುವ ಶಂಖವನ್ನೂದಿದ. ವಾನಪ್ರಸ್ಥ ಕಾಲದಲ್ಲಿ ಅಸುರರ ವಿರುದ್ಧ ಹೊರಾಡಿದ್ದಕ್ಕಾಗಿ ಅರ್ಜುನನಿಗೆ ಇಂದ್ರ ದೇವಲೋಕದಲ್ಲಿ ವಿಶಿಷ್ಟವಾದ ಕಿರೀಟವನ್ನು ತೊಡಿಸಿ ಈ ಶಂಖವನ್ನು ಉಡುಗೊರೆಯಾಗಿ ಕೊಟ್ಟಿದ್ದ. ಈ ಶಂಖವೂ ಕೂಡಾ ದುಷ್ಟ ನಿಗ್ರಹದ ಸಂಕೇತ.
ಅರ್ಜುನನ ಶಂಖ ನಾದದ ನಂತರ ವೃಕೋದರನಾದ ಭೀಮನು ಪೌಂಡ್ರ ಎನ್ನುವ ಮಹಾ ಶಂಖವನ್ನು ಊದಿದನು. ಇಲ್ಲಿ ಭೀಮನನ್ನು ವೃಕೋದರ ಎಂದು ಸಂಬೋಧಿಸಿದ್ದಾರೆ. ವೃಕೋದರ ಎಂದರೆ ಇಡೀ ವಿಶ್ವವನ್ನು ಸುಡಬಲ್ಲ ಅಗ್ನಿಯನ್ನು ಉದರದಲ್ಲಿ ಧರಿಸಿದವನು ಎಂದರ್ಥ. ಭೀಮ ಎಂತಹ ಪರಾಕ್ರಮಶಾಲಿ ಎನ್ನುವುದನ್ನು ಇಲ್ಲಿ ಈ ರೀತಿ ವ್ಯಕ್ತಪಡಿಸಿದ್ದಾರೆ.
ಈ ಶ್ಲೋಕದಲ್ಲಿ ಶ್ರೀಕೃಷ್ಣನನ್ನು ಹೃಷೀಕೇಶ ಎಂದು ಸಂಬೋಧಿಸಿದ್ದಾರೆ. ಹೃಷೀಕೇಶ ಎಂದರೆ ಹೃಷೀಕಗಳಿಗೆ ಈಶ. ಇಲ್ಲಿ ಹೃಷೀಕ ಎಂದರೆ ಇಂದ್ರಿಯಗಳು. ಆತ ಇಂದ್ರಿಯಗಳ ಸ್ವಾಮಿ. ನಮಗೆ ಪ್ರತಿಯೊಂದು ಇಂದ್ರಿಯಗಳನ್ನು ದಯಪಾಲಿಸಿ , ಅದರಲ್ಲಿ ನಿಂತು ನೆಡೆಸುವವನು ಹೃಷೀಕಗಳ ಈಶನಾದ ಹೃಷೀಕೇಶ. ಕೇಶ ಅನ್ನುವ ಶಬ್ದಕ್ಕೆ ಸೂರ್ಯಕಿರಣ ಎನ್ನುವ ಅರ್ಥವಿದೆ. ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆ. ಈ ಏಳು ವರ್ಣದಲ್ಲಿ ತುಂಬಿ ಬದುಕಿಗೆ ಹರ್ಷವನ್ನು ಕೊಡತಕ್ಕಂತಹ ಭಗವಂತ ಹೃಷೀಕೇಶಃ