ಶ್ಲೋಕ – 02
ಭವಾಪ್ಯಯೌ ಹಿ ಭೂತಾನಾಂ ಶ್ರುತೌ ವಿಸ್ತರಶೋ ಮಯಾ ।
ತ್ವತ್ತಃ ಕಮಲಪತ್ರಾಕ್ಷ ಮಾಹಾತ್ಮ್ಯಮಪಿ ಚಾವ್ಯಯಮ್ ॥೨॥
ಭವ ಅಪ್ಯಯೌ ಹಿ ಭೂತಾನಾಮ್ ಶ್ರುತೌ ವಿಸ್ತರಶಃ ಮಯಾ ।
ತ್ವತ್ತಃ ಕಮಲಪತ್ರ ಅಕ್ಷ ಮಾಹಾತ್ಮ್ಯಮ್ ಅಪಿ ಚ ಅವ್ಯಯಮ್ –- ಜೀವಿಗಳ ಹುಟ್ಟು ಸಾವುಗಳ ಬಿತ್ತರವನ್ನು ನಾನು ನಿನ್ನಿಂದ ಕೇಳಿದೆ; ಓ ತಾವರೆ ಎಸಳಂಥ ಕಣ್ಗಳವನೆ, ನಿನ್ನ ಅಳಿವಿರದ ಮಹಿಮೆಯನ್ನು ಕೂಡ.
“ಜೀವಿಗಳ ಭವ ಮತ್ತು ಅಪ್ಯಯಗಳ ಬಿತ್ತರವನ್ನು ನಾನು ನಿನ್ನಿಂದ ಕೇಳಿದೆ” ಎನ್ನುತ್ತಾನೆ ಅರ್ಜುನ. ಇಲ್ಲಿ ಭವ ಮತ್ತು ಅಪ್ಯಯ ಎನ್ನುವುದಕ್ಕೆ ಹುಟ್ಟು-ಸಾವು, ಸೃಷ್ಟಿ-ಸಂಹಾರ ಎನ್ನುವ ಅರ್ಥವಲ್ಲದೆ ಇನ್ನೊಂದು ಬಹಳ ರೋಚಕವಾದ ಅರ್ಥವಿದೆ. ವೇದಕಾಲದ ಋಷಿಗಳು ಇದನ್ನು ಒಂದು ಹೊಸ ಅರ್ಥದಲ್ಲಿ ಬಳಸುತ್ತಿದ್ದರು. “ಪ್ರಭವಾಪ್ಯಯೌ ಭೂತಾನಾಂ” ಎಂದು ಉಪನಿಷತ್ತಿನಲ್ಲಿ ಬರುತ್ತದೆ. ಸುಖಪ್ರಾಪ್ತಿ-ಭವ ಮತ್ತು ದುಃಖನಿವೃತ್ತಿ-ಅಪ್ಯಯ. ಇದು ಪ್ರಾಚೀನ ಋಷಿಗಳ ಅರ್ಥ. “ಯಾವ ರೀತಿಯ ನಡೆಯಿಂದ ಸುಖ ಪಡೆಯಬಹುದು, ಯಾವ ರೀತಿಯ ನಡೆಯಿಂದ ನಮ್ಮ ಬದುಕಿನ ದುಃಖದಿಂದ ಪಾರಾಗಬಹುದು ಅನ್ನುವ ಮೂಲ ಮಂತ್ರವನ್ನು ನಿನ್ನ ಬಾಯಿಯಿಂದಲೇ ಹೇಳಿದಿ-ಅದನ್ನು ನಾನು ಕಿವಿಯಾರೆ ಕೇಳಿದೆ” ಎನ್ನುತ್ತಾನೆ ಅರ್ಜುನ.
ಇಲ್ಲಿ ‘ಕಮಲಪತ್ರಾಕ್ಷ’ ಎನ್ನುವ ಒಂದು ವಿಶೇಷಣ ಬಳಸಿದ್ದಾರೆ. ಇದನ್ನು ಅರ್ಜುನ ಪ್ರಯೋಗ ಮಾಡುವುದರಲ್ಲಿ ಒಂದು ವಿಶೇಷವಿದೆ. “ನೀನು ನನ್ನ ಮೇಲೆ ಕಾರುಣ್ಯದ ರಸಧಾರೆಯನ್ನು ಹರಿಸಿದೆಯಲ್ಲ ಕೃಷ್ಣ” ಎನ್ನುವ ಭಾವ ಈ ವಿಶೇಷಣದ ಹಿಂದಿದೆ. “ನಿನ್ನ ಮಹಿಮೆ ಅವ್ಯಯ ಅನಂತವಾಗುಳಿಯುವ ಸಂಪತ್ತು. ಆ ಮಹತ್ತಾದ ಜ್ಞಾನವನ್ನು ನನಗೆ ಕೊಟ್ಟೆ. ಅತಿ ದುರ್ಲಭವಾದ ನಿನ್ನ ಮಹಿಮೆಯನ್ನು ನನಗೆ ಹೇಳಿದೆ” ಎನ್ನುತ್ತಾನೆ ಅರ್ಜುನ.
