ಶ್ಲೋಕ – 05
ಭಗವಾನುವಾಚ ।
ಪಶ್ಯ ಮೇ ಪಾರ್ಥ ರೂಪಾಣಿ ಶತಶೋSಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ ನಾನಾವರ್ಣಾಕೃತೀನಿ ಚ ॥೫॥
ಭಗವಾನ್ ಉವಾಚ-ಭಗವಂತ ಹೇಳಿದನು :
ಪಶ್ಯ ಮೇ ಪಾರ್ಥ ರೂಪಾಣಿ ಶತಶಃ ಅಥ ಸಹಸ್ರಶಃ ।
ನಾನಾವಿಧಾನಿ ದಿವ್ಯಾನಿ ನಾನಾ ವರ್ಣ ಆಕೃತೀನಿ ಚ –ನೋಡು ಪಾರ್ಥ, ನನ್ನ ರೂಪಗಳನ್ನು- ನೂರಾರು, ಸಾವಿರಾರು; ಬಗೆಬಗೆಯವು; ಹೊಳೆಯುವಂಥವು; ಹಲವು ಬಣ್ಣ-ಆಕಾರದವು.
ನಿನ್ನ ರೂಪವನ್ನು ತೋರು ಎಂದು ಅರ್ಜುನ ಏಕವಚನದಲ್ಲಿ ಕೇಳಿದರೆ ಕೃಷ್ಣ ಬಹುವಚನದಲ್ಲಿ ಹೇಳುತ್ತಾನೆ “ನೋಡು ನನ್ನ ರೂಪಗಳನ್ನು” ಎಂದು. ಭಗವಂತನ ಎಲ್ಲಾ ರೂಪಗಳೂ ಒಂದೆ. ಮೂಲ ರೂಪಕ್ಕೂ ಅವತಾರ ರೂಪಕ್ಕೂ ಭೇದವಿಲ್ಲ. “ನೀನು ಹಿಂದೆಂದೂ ಕಾಣದ ಅತ್ಯದ್ಭುತವಾದ ನನ್ನ ನೂರಾರು, ಸಾವಿರಾರು, ಬಗೆಬಗೆಯ, ಹೊಳೆಯುವಂಥಹ, ಹಲವು ಬಣ್ಣ ಮತ್ತು ಆಕಾರದ ರೂಪಗಳನ್ನು ನೋಡು” ಎಂದು ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಇಲ್ಲಿ ಕೃಷ್ಣ ಅರ್ಜುನನನ್ನು ‘ಪಾರ್ಥ’ ಎಂದು ಸಂಬೋಧಿಸಿದ್ದಾನೆ. ನಿಜವಾದ ವೇದಾರ್ಥ ತಿಳಿದು ವೇದಾರ್ಥಭೂತನಾದ ಭಗವಂತನೆಡೆಗೆ ಪಯಣ ಹೊರಟವರು ‘ಪಾರ್ಥರು’.
