ಶ್ಲೋಕ – 07
ಇಹೈಕಸ್ಥಂ ಜಗತ್ ಕೃತ್ಸ್ನಂ ಪಶ್ಯಾದ್ಯ ಸಚರಾಚರಮ್ ।
ಮಮ ದೇಹೇ ಗುಡಾಕೇಶ ಯಚ್ಚಾನ್ಯದ್ ದ್ರಷ್ಟುಮಿಚ್ಛಸಿ ॥೭॥
ಇಹ ಏಕ ಸ್ಥಮ್ ಜಗತ್ ಕೃತ್ಸ್ನಮ್ ಪಶ್ಯ ಅದ್ಯ ಸ ಚರ ಅಚರಮ್ ।
ಮಮ ದೇಹೇ ಗುಡಾಕೇಶ ಯತ್ ಚ ಅನ್ಯತ್ ದ್ರಷ್ಟುಮ್ ಇಚ್ಛಸಿ—ಇಲ್ಲಿ ನೋಡೀಗ, ನನ್ನ ಮೈಯಲ್ಲಿ ಚರಾಚರಗಳಿಂದ ಕೂಡಿದ ಇಡಿಯ ಜಗತ್ತು ಒಂದುಗೂಡಿದ್ದನ್ನು. ಓ ಗುಡಾಕೇಶ, ಇನ್ನೇನು ನೋಡ ಬಯಸುವೆ ಅದನ್ನೆಲ್ಲಾ ನೋಡು.
“ನನ್ನ ದೇಹವನ್ನು ಆಶ್ರಯಿಸಿಕೊಂಡಿರುವ ಸಮಸ್ತ ವಿಶ್ವವನ್ನು ನೋಡು. ಬ್ರಹ್ಮಾಂಡದೊಳಗೆ ಏನೇನಿದೆಯೋ ಅದೆಲ್ಲವೂ ಇಲ್ಲಿದೆ. ಚೇತನ, ಅಚೇತನ, ಚಲಿಸುವ, ಚಲಿಸದ, ಎಲ್ಲವೂ. ನಿನಗೆ ಏನು ನೋಡಬೇಕು ಎಂದು ನಿನ್ನ ಮನಸ್ಸು ಬಯಸುತ್ತದೆ ಅದನ್ನು ನೋಡು” ಎನ್ನುತ್ತಾನೆ ಕೃಷ್ಣ. ಇಲ್ಲಿ ಕೃಷ್ಣ ಅರ್ಜುನನನ್ನು ಗುಡಾಕೇಶ ಎಂದು ಸಂಬೋಧಿಸುತ್ತಾನೆ. ಅಜ್ಞಾನ, ಆಲಸ್ಯ ಮತ್ತು ನಿದ್ದೆಯನ್ನು ಗೆದ್ದವ ಗುಡಾಕೇಶ.
ಇಲ್ಲಿ ಒಂದೊಂದು ಶ್ಲೋಕದಲ್ಲಿ ಒಂದೊಂದು ವಿಶೇಷಣ ಬಳಸಿದ್ದಾರೆ. ಈ ವಿಶೇಷಣದ ಹಿಂದೆ ಇರುವ ಅರ್ಥವನ್ನು ನೋಡಿದಾಗ ತಿಳಿಯುವುದೇನೆಂದರೆ -ನಮಗೆ ಭಗವಂತ ತಿಳಿಯಬೇಕಾದರೆ ನಾವೂ ಕೂಡ ಪಾರ್ಥ, ಭಾರತ, ಗುಡಾಕೇಶರಾಗಬೇಕು ಎನ್ನುವುದು. ವೇದಾರ್ಥ ತಿಳಿದು ವೇದಾರ್ಥಭೂತನಾದ ಭಗವಂತನೆಡೆಗೆ ಪಯಣ(ಪಾರ್ಥ), ಪ್ರಾಣತತ್ವದ ಉಪಾಸನೆ(ಭಾರತ), ಅಜ್ಞಾನ, ಆಲಸ್ಯ ಗೆದ್ದು ಭಗವಂತನ ಚಿಂತನೆ(ಗುಡಾಕೇಶ) ಮಾಡಿದಾಗ- ಆ ಭಗವಂತನ ರೂಪ ನಮಗೆ ತಿಳಿದೀತು.
