ಶ್ಲೋಕ – 27
ಪ್ರಶಾಂತಮನಸಂ ಹ್ಯೇನಂ ಯೋಗಿನಂ ಸುಖಮುತ್ತಮಮ್ ।
ಉಪೈತಿ ಶಾಂತರಜಸಂ ಬ್ರಹ್ಮಭೂತಮಕಲ್ಮಷಮ್ ॥೨೭॥
ಉಚ್ಚಾರಣೆ: ಪ್ರಶಾಂತ ಮನಸಮ್ ಹಿ ಎನಮ್ ಯೋಗಿನಮ್ ಸುಖಮ್ ಉತ್ತಮಮ್ ।
ಉಪೈತಿ ಶಾಂತರಜಸಮ್ ಬ್ರಹ್ಮಭೂತಮ್ ಅಕಲ್ಮಷಮ್ –ವಿಷಯಗಳತ್ತ ಹರಿಯದೆ ಹಾಯಾದ ಬಗೆಯವನನ್ನು, ರಜೋಗುಣದ ಬಿಸಿಯಳಿದು ತಿಳಿಯಾದವನನ್ನು, ಭಗವಂತನಲ್ಲೆ ನೆಲೆನಿಂತ ಇಂಥ ಯೋಗಿಯನ್ನು ಸುಖದ ಸುಗ್ಗಿ ನುಗ್ಗಿ ಬರುತ್ತದೆ.
ಒಮ್ಮೆ ನಮ್ಮ ಮನಸ್ಸು ಭಗವಂತನಲ್ಲಿ ನೆಲೆ ನಿಂತಿತೆಂದರೆ ಗೊಂದಲದ ಗೂಡಾದ ಮನಸ್ಸು ಪ್ರಶಾಂತವಾಗುತ್ತದೆ. ಇದನ್ನು ಸಾಧಿಸಿದ ವ್ಯಕ್ತಿ ಎಂತಹ ಸನ್ನಿವೇಶದಲ್ಲೂ ಉದ್ವೇಗಕ್ಕೊಳಗಾಗುವುದಿಲ್ಲ. ಜೀವನದಲ್ಲಿ ನಾವು ಅನುಭವಿಸಬೇಕಾದ ನಿಜವಾದ ಶ್ರೇಷ್ಠ ಸುಖ ಏನು ಎನ್ನುವುದು ಈ ಸ್ಥಿತಿಯಲ್ಲಿ ತಿಳಿಯುತ್ತದೆ. ಮನಸ್ಸು ಸಾಮಾನ್ಯವಾಗಿ ಬಯಸುವ ರಾಜಸ ಸುಖದಲ್ಲಿ ಇರುವ ನಿರಾಶೆ ಇಲ್ಲಿ ಎಂದೂ ಇರದು. ಈ ಸ್ಥಿತಿಯಲ್ಲಿ ನಾವು ಸ್ವಚ್ಚವಾಗುತ್ತೇವೆ. ಇದು ನಿಜವಾದ ಮಡಿ. ಮನಸ್ಸಿನ ಸ್ವಚ್ಚತೆಯನ್ನು ಸಾಧಿಸದೆ ಬಾಹ್ಯ ಮಡಿ ಮಾಡುವುದರಿಂದ ಯಾವ ಉಪಯೋಗವೂ ಇಲ್ಲ.ಶುದ್ಧವಾದ ಮನಸ್ಸಿಗೆ ಯಾವುದೂ ಮೈಲಿಗೆ ಅಲ್ಲ! ಮನಸ್ಸು ಮಡಿಯಾದರೆ ಅವನು ಮೈಲಿಗೆಯಾಗುವ ಸಾಧ್ಯತೆ ಇಲ್ಲ. ಇದು ಮಾನವ ತನ್ನ ಜೀವಮಾನದಲ್ಲಿ ಪಡೆಯಬಹುದಾದ ಪರಮಾನಂದದ ಸ್ಥಿತಿ
