ಶ್ಲೋಕ – 33
ಅರ್ಜುನ ಉವಾಚ ।
ಯೋSಯಂ ಯೋಗಸ್ತ್ವಯಾ ಪ್ರೋಕ್ತಃ ಸಾಮ್ಯೇನ ಮಧುಸೂದನ ।
ಏತಸ್ಯಾಹಂ ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಂ ಸ್ಥಿರಾಮ್ ॥೩೩॥
ಅರ್ಜುನಃ ಉವಾಚ-ಅರ್ಜುನ ಕೇಳಿದನು :
ಉಚ್ಚಾರಣೆ- ಯಃ ಅಯಾಮ್ ಯೋಗಃ ತ್ವಯಾ ಪ್ರೋಕ್ತಃ ಸಾಮ್ಯೇನ ಮಧು ಸೂದನ ।
ಏತಸ್ಯ ಅಹಮ್ ನ ಪಶ್ಯಾಮಿ ಚಂಚಲತ್ವಾತ್ ಸ್ಥಿತಿಮ್ ಸ್ಥಿರಾಮ್-
ಮಧುಸೂದನ, ನೀನು ಸಮದೃಷ್ಟಿಯ ಧ್ಯಾನ ಯೋಗವನ್ನು ಹೇಳಿದೆ. ನನಗನಿಸುತ್ತದೆ: ಮನಸ್ಸು ಚಂಚಲವಾದ್ದರಿಂದ ಇದರಲ್ಲಿ ಗಟ್ಟಿಯಾಗಿ ನಿಲ್ಲುವುದು ಸಾಧ್ಯವಿಲ್ಲ.
ಸಾತ್ವಿಕರಿಗೆ ಆನಂದವನ್ನು ಕೊಡುವ ‘ಓ ಮಧುಸೂದನ’ ಎಂದು ಅರ್ಜುನ ಶ್ರೀಕೃಷ್ಣನನ್ನು ಸಂಭೋದಿಸಿ ಹೇಳುತ್ತಾನೆ: “ನೀನು ಸಂಗ್ರಹವಾಗಿ ಹೇಳಿದ ಈ ಧ್ಯಾನ ಪದ್ಧತಿಯನ್ನು ನಾವು ಅಳವಡಿಸಿಕೊಳ್ಳಲು ಹೇಗೆ ಸಾಧ್ಯ? ಧ್ಯಾನವೆಂಬುದು ಸಂಪೂರ್ಣ ಮಾನಸಿಕ ಪ್ರಕ್ರಿಯೆ. ಆದರೆ ನಮ್ಮ ಮನಸ್ಸು ಪ್ರಕ್ಷಬ್ಧ ಮತ್ತು ಚಂಚಲ. ಇಂತಹ ಮನಸ್ಸನ್ನು ಹಿಡಿತದಲ್ಲಿಟ್ಟು ನೀನು ಹೇಳಿದ ಸ್ಥಿರವಾದ ಈ ಧ್ಯಾನಯೋಗವನ್ನು ಸಾಧಿಸುವುದು ಸಾಧ್ಯವಿಲ್ಲ” ಎನ್ನುತ್ತಾನೆ ಅರ್ಜುನ.
