ಶ್ಲೋಕ – 25
ನಾಹಂ ಪ್ರಕಾಶಃ ಸರ್ವಸ್ಯ ಯೋಗಮಾಯಾಸಮಾವೃತಃ ।
ಮೂಢೋSಯಂ ನಾಭಿಜಾನಾತಿ ಲೋಕೋ ಮಾಮಜಮವ್ಯಯಮ್ ॥೨೫॥
ನ ಅಹಮ್ ಪ್ರಕಾಶಃ ಸರ್ವಸ್ಯ ಯೋಗ ಮಾಯಾ ಸಮಾವೃತಃ ।ಮೂಢಃ ಅಯಮ್ ನ ಅಭಿಜಾನಾತಿ ಲೋಕಃ ಮಾಮ್ ಅಜಮ್ ಅವ್ಯಯಮ್-
ನನ್ನ ಸಾಮರ್ಥ್ಯ ಮತ್ತು ಪ್ರಕೃತಿಯ ಮಾಯೆಯಿಂದ ಮುಚ್ಚಿಕೊಂಡಿರುವ ನಾನು ಎಲ್ಲರಿಗೂ ಬಯಲಾಗಲಾರೆ. ಹುಟ್ಟಿರದ ಸಾವಿರದ ನನ್ನನ್ನು ಈ ತಿಳಿಗೇಡಿ ಮಂದಿ ತಿಳಿಯಲಾರರು.
ಭಗವಂತ ಎಲ್ಲರಿಗೂ ಕಾಣಿಸಿಕೊಳ್ಳುವುದಿಲ್ಲ. ಆತನ ಅನಂತ ಗುಣದ ಸ್ಪಷ್ಟ ಚಿತ್ರ ಯಾರಿಗೂ ಬರುವುದು ಸಾಧ್ಯವಿಲ್ಲ. ಮನುಷ್ಯನ ಚಿಂತನೆಗೆ ಒಂದು ಮಿತಿ ಇದೆ, ಆದರೆ ಭಗವಂತ ಆ ಮಿತಿಯ ಒಳಗಿಲ್ಲ. ಆದ್ದರಿಂದ ನಮ್ಮ ಬುದ್ಧಿ ಆತನ ಅನಂತವಾದ ಜ್ಞಾನವನ್ನು, ಅನಂತವಾದ ಶಕ್ತಿಯನ್ನೂ, ಆನಂತ ರೂಪವನ್ನು ಗ್ರಹಿಸಲಾರದು. ನಾವು ಇಚ್ಛೆಪಟ್ಟಾಗ ಭಗವಂತ ಕಾಣುವುದಿಲ್ಲ. ಆದರೆ ಕಾಲ ಪಕ್ವವಾದಾಗ ತನ್ನ ಇಚ್ಛೆಯಂತೆ ಭಗವಂತ ಜ್ಞಾನಾನಂದ ಸ್ವರೂಪವಾದ ಮನಸ್ಸು ಮತ್ತು ಜ್ಞಾನಾನಂದ ಸ್ವರೂಪವಾದ ಇಂದ್ರಿಯಗಳಿಗೆ ಯಥಾಶಕ್ತಿ ಗೋಚರವಾಗಬಲ್ಲ.
ಈ ಲೋಕದಲ್ಲಿ ಅಜ್ಞಾನದ ಮೋಹಕ್ಕೆ ಒಳಗಾದ ಜೀವಜಾತ ಎಂದೂ ಭಗವಂತನನ್ನು ಗ್ರಹಿಸಲಾರದು. ಜೀವನಿಗೂ ಮತ್ತು ಭಗವಂತನಿಗೂ ನಡುವೆ ಇರುವ ಅಜ್ಞಾನವೆಂಬ ಮಾಯಾ ಪರದೆಯಿಂದಾಗಿ ಭಗವಂತ ನಮಗೆ ಕಾಣುವುದಿಲ್ಲ.
