ಶ್ಲೋಕ – 06
ಏತದ್ಯೋನೀನಿ ಭೂತಾನಿ ಸರ್ವಾಣೀತ್ಯುಪಧಾರಯ ।
ಅಹಂ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಳಯಸ್ತಥಾ ॥೬॥
ಏತತ್ ಯೋನೀನಿ ಭೂತಾನಿ ಸರ್ವಾಣಿ ಇತಿ ಉಪಧಾರಯ ।
ಅಹಮ್ ಕೃತ್ಸ್ನಸ್ಯ ಜಗತಃ ಪ್ರಭವಃ ಪ್ರಳಯಃ ತಥಾ-
ಈ ಎರಡು ಪ್ರಕೃತಿಗಳಿಂದಲೆ ಎಲ್ಲ ಜೀವಿಗಳೂ ರೂಪುಗೊಂಡಿವೆ ಎಂದು ತಿಳಿ. ನಾನೇ ಎಲ್ಲ ಜಗದ ಹುಟ್ಟು-ಸಾವುಗಳಿಗೆ ಕಾರಣನಾಗಿದ್ದೇನೆ.
ಜಡ ಪ್ರಕೃತಿ ಮತ್ತು ಚಿತ್ ಪ್ರಕೃತಿ ಇವೇ ಇಡೀ ಜಗತ್ತಿನ ಎಲ್ಲಾ ಜೀವಜಾತಕ್ಕೆ ಮೂಲ ಕಾರಣ. ಭಗವಂತ ಜೀವಜಾತದ ಹಿಂದೆ ತಂದೆಯಾಗಿ, ಲಕ್ಷ್ಮೀದೇವಿ ತಾಯಿಯಾಗಿ ನಿಂತು ಈ ಜಗತ್ತನ್ನು ಸೃಷ್ಟಿ ಮಾಡಿದರು. ತಾಯಿಯ ಗರ್ಭದಲ್ಲಿ ಬೆಳೆಯುವ ಭ್ರೂಣದಂತೆ ಜಡಪ್ರಕೃತಿ ವಿಕಾರಗೊಂಡಿತು. ಹೀಗೆ ಚಿತ್ ಪ್ರಕೃತಿ ಜಡ ಪ್ರಕೃತಿಗೆ ರೂಪ ಕೊಟ್ಟಳು, ಕೊಟ್ಟು ಧಾರಣೆ ಮಾಡಿದಳು, ಅದೇ ಜಗತ್ತಾಯಿತು.
ಭಗವಂತನ ಶಕ್ತಿ ಆಧಾನದಿಂದ, ಪ್ರೇರಣೆಯಿಂದ, ಜಡ ಮತ್ತು ಚಿತ್ ಪ್ರಕೃತಿಯ ಮೂಲಕ ಈ ಜಗತ್ತಿನ ಹುಟ್ಟಿಗೆ ಭಗವಂತ ಹೇಗೆ ಕಾರಣನೋ ಹಾಗೇ ಇಡೀ ಜಗತ್ತಿನ ಪ್ರಳಯ ಕೂಡಾ ಭಗವಂತ. ಕೃಷ್ಣ ಹೇಳುತ್ತಾನೆ “ ಸಮಸ್ತ ಜಗತ್ತಿನ ಉತ್ಪತ್ತಿಗೆ ಮೂಲ ಕಾರಣ ನಾನು, ಜಗತ್ತಿನ ಸಂಹಾರಕ್ಕೆ ಕಾರಣ ನಾನು” ಎಂದು. ಈ ಜಗತ್ತಿನ ಹುಟ್ಟಿನ ಮೊದಲಿದ್ದವ, ಹುಟ್ಟಿಗೆ ಕಾರಣ, ಸಂಹಾರಕ್ಕೆ ಕಾರಣ, ಸಂಹಾರದ ನಂತರ ಇರುವವ ಆ ಭಗವಂತ.
ನಮ್ಮಲ್ಲಿ ಕೆಲವರು ಕೇಳುವುದಿದೆ: ಜಡಪ್ರಕೃತಿಗೆ ನಿಯಾಮಕ ಶಕ್ತಿ- ಚೇತನಪ್ರಕೃತಿ, ಚೇತನ ಪ್ರಕೃತಿಯನ್ನು ಪ್ರೇರಣೆ ಮಾಡಿ ಸೃಷ್ಟಿ ಸಂಹಾರದಲ್ಲಿ ತೊಡಗಿಸುವವ ‘ಪುರುಷ’ ನಾಮಕ ಭಗವಂತ. ಹಾಗಾದರೆ ಈ ಭಗವಂತನನ್ನು ನಿಯಂತ್ರಿಸುವವರು ಯಾರು? ಎಂದು.

[…] ಹಿಂದಿನ ಶ್ಲೋಕ – ಭಗವದ್ಗೀತೆ ಆಧ್ಯಾಯ -7 ಶ್ಲೋಕ-06 […]