ಶ್ಲೋಕ – 12
ಯೇ ಚೈವ ಸಾತ್ತ್ವಿಕಾ ಭಾವಾ ರಾಜಸಾಸ್ತಾಮಸಾಶ್ಚ ಯೇ ।
ಮತ್ತ ಏವೇತಿ ತಾನ್ ವಿದ್ಧಿ ನ ತ್ವಹಂ ತೇಷು ತೇ ಮಯಿ ॥೧೨॥
ಯೇ ಚ ಏವ ಸಾತ್ತ್ವಿಕಾಃ ಭಾವಾ ರಾಜಸಾಃ ತಾಮಸಾಃ ಚ ಯೇ ।
ಮತ್ತ ಮತ್ತಃ ಏವ ಇತಿ ತಾನ್ ವಿದ್ಧಿ ನ ತು ಅಹಮ್ ತೇಷು ತೇ ಮಯಿ-
ಯಾವ ವಸ್ತುಗಳು ಸತ್ವಗುಣದ ಪ್ರಭಾವಕ್ಕೆ ಒಳಗಾದವು ಮತ್ತು ಯಾವವು
ರಜೋಗುಣ ಮತ್ತು ತಮೋಗುಣದ ಪ್ರಭಾವಕ್ಕೆ-ಅವೆಲ್ಲವೂ ನನ್ನಿಂದಾಗಿಯೇ ಆಗಿವೆ ಎಂದು ತಿಳಿ.
ನಾನು ಅವುಗಳ ಹಂಗಿನಲ್ಲಿಲ್ಲ. ಅವು ನನ್ನ ಹಂಗಿನಲ್ಲಿವೆ.
ಈ ಪ್ರಪಂಚ ಎಂದರೆ ಅಂತರಂಗ ಮತ್ತು ಬಹಿರಂಗ. ಅಂತರಂಗ ಪ್ರಪಂಚದಲ್ಲಿ ತ್ರೈಗುಣ್ಯದ ಭಾವನೆಗಳು, ಬಾಹ್ಯ ಪ್ರಪಂಚದಲ್ಲಿ ತ್ರೈಗುಣ್ಯ ಪದಾರ್ಥಗಳು. ಸತ್ವ, ರಜಸ್ಸು ಮತ್ತು ತಮಸ್ಸು ಈ ಮೂರರ ಸಮಾವೇಶವೇ ಈ ಪ್ರಪಂಚ. ಮಣ್ಣು ತಮೋಗುಣದ, ನೀರು ರಜೋಗುಣದ ಮತ್ತು ಬೆಂಕಿ ಸತ್ವ ಗುಣದ ಸಂಕೇತ. ಆದ್ದರಿಂದ ಈ ಪ್ರಪಂಚದಲ್ಲಿ ನಮಗೆ ಕಾಣುವ ಪ್ರತಿಯೊಂದು ವಸ್ತುವೂ ಕೂಡಾ ಈ ಮೂರರ ಸಮಾವೇಶ. ನಮ್ಮ ಅಂತರಂಗದ ಭಾವನೆಗಳೂ ಕೂಡಾ ಈ ಮೂರು ಗುಣದ ಸಮಾವೇಶ. ನಮ್ಮಲ್ಲಿರುವ ವರ್ಣ ಪದ್ಧತಿ ಕೂಡಾ ತ್ರೈಗುಣ್ಯ ಆಧಾರಿತ. ಎಲ್ಲರಲ್ಲಿಯೂ ಕೂಡಾ ಈ ಮೂರು ಗುಣಗಳಿವೆ. ಆದರೆ ಸತ್ವದ ಅಂಶ ಹೆಚ್ಚಾಗಿದ್ದು, ರಜಸ್ಸು ಮತ್ತು ತಮಸ್ಸು ಕಡಿಮೆ ಇರುವವ ಬ್ರಾಹ್ಮಣ ವರ್ಣ; ರಜಸ್ಸಿನ ಅಂಶ ಹೆಚ್ಚಾಗಿದ್ದು ಅದರ ನಂತರ ಸತ್ವ ಮತ್ತು ತಮಸ್ಸು ಇರುವವ ಕ್ಷತ್ರಿಯ; ರಜಸ್ಸು ಹೆಚ್ಚಾಗಿದ್ದು ಅದರ ನಂತರ ತಮಸ್ಸು ಮತ್ತು ಸತ್ವ ಗುಣ ಉಳ್ಳವ ವೈಶ್ಯ; ತಮೋಗುಣ ಹೆಚ್ಚಾಗಿದ್ದು, ಅದರ ನಂತರ ರಜಸ್ಸು ಮತ್ತು ಸತ್ವ ಗುಣ ಉಳ್ಳವ ಶೂದ್ರ.
ಈ ಎಲ್ಲಾ ವರ್ಣದವರೂ ಮೋಕ್ಷ ಯೋಗ್ಯರೆ. ಸೃಷ್ಟಿಯ ಆದಿಯಲ್ಲಿ ಈ ಮೂರು ಗುಣಗಳ ಮಿಶ್ರಣವಾಗಿಯೇ ಸೃಷ್ಟಿ ಪ್ರಾರಂಭವಾಯಿತು.
ಇಲ್ಲಿ ಶುದ್ಧ ಸತ್ವ ಅನ್ನುವುದೊಂದಿಲ್ಲ. (ಗಣಿತಬದ್ಧವಾಗಿ ಹೇಗೆ ತ್ರೈಗುಣ್ಯದಿಂದ ಈ ಪ್ರಪಂಚ ನಿರ್ಮಾಣವಾಯಿತು ಎನ್ನುವುದನ್ನು ಮಧ್ವಾಚಾರ್ಯರು ತಮ್ಮ ಭಾಗವತ ತಾತ್ಪರ್ಯನಿರ್ಣಯ ಗ್ರಂಥದಲ್ಲಿ ಸ್ಪಷ್ಟವಾಗಿ ವಿವರಿಸಿದ್ದಾರೆ. ಇದೊಂದು ಸೃಷ್ಟಿಯ ಪ್ರಮೇಯ).
ಹೀಗೆ ಪ್ರತಿಯೊಂದು ಪದಾರ್ಥದಲ್ಲಿ ಮೂರು ಅಂಶಗಳಿವೆ ಮತ್ತು ನಮ್ಮ ಭಾವದಲ್ಲಿಯೂ ಮೂರು ಅಂಶಗಳಿವೆ.
ಈ ಮೂರು ಗುಣಗಳ ಸಂಕೀರ್ಣ ಪ್ರಪಂಚ ಬಹಳ ವಿಚಿತ್ರ.
ಇವುಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂದು ಮನುಷ್ಯ ತೀರ್ಮಾನ ಮಾಡಲಾಗದಷ್ಟು ಗೊಂದಲಗೆಡಿಸುತ್ತವೆ.
ಆದರೆ ಇಲ್ಲಿ ಕೃಷ್ಣ ಹೇಳುತ್ತಾನೆ “ತ್ರೈಗುಣ್ಯ ವರ್ಜಿತನಾಗಿ ಈ ಮೂರು ಗುಣಗಳನ್ನುಕೊಡುತ್ತಿರುವವನು ನಾನು” ಎಂದು! ಪ್ರತಿಯೊಂದು ಜೀವದ ಜೀವ ಸ್ವಭಾವಕ್ಕನುಗುಣವಾಗಿ, ಅದಕ್ಕೆ ಬೇಕಾದ ಗುಣ ಪ್ರವೃತ್ತಿಯನ್ನು ಕೊಡುವವ ಆ ಭಗವಂತ.
ಯಾರಲ್ಲೂ ಯಾವ ಕ್ರಿಯೆಯೂ ಭಗವಂತನ ಪ್ರೇರಣೆ ಇಲ್ಲದೆ ಆಗುವುದಿಲ್ಲ.
ಹಿಂದೆ ವಿವರಿಸಿದಂತೆ ಜೀವನಿಗೆ ಸ್ವತಂತ್ರ ಇಚ್ಛಾಪೂರ್ವಕ ಕ್ರಿಯೆ ಇಲ್ಲ.
“ನಹಿ ಪ್ರತಿಬಿಂಬಸ್ಯ ಕ್ರಿಯಾ | ಸ ಹಿ ಬಿಂಬ ಕ್ರಿಯೈವ ಕ್ರಿಯಾವಾನ್ ||”.
ಬಿಂಬದಲ್ಲಿ ಕ್ರಿಯೆ ಇಲ್ಲದೆ ಪ್ರತಿಬಿಂಬದಲ್ಲಿ ಕ್ರಿಯೆ ಇಲ್ಲ.
ಭಗವಂತನ ಅಧೀನವಾಗಿ ಈ ಮೂರು ಗುಣಗಳು ಈ ಪ್ರಪಂಚದಲ್ಲಿ ತುಂಬಿಕೊಂಡಿವೆ.
ಇದು ನಮ್ಮ ಜೀವ ಪಕ್ವವಾಗಿ ಮೋಕ್ಷವನ್ನು ಸೇರಲು ಭಗವಂತ ನಿರ್ಮಿಸಿರುವ ಪಾಠಶಾಲೆ.
ಭಗವಂತ ತ್ರೈಗುಣ್ಯ ವರ್ಜಿತ. ಆತ ತ್ರಿಗುಣದ ನಿಯಂತ್ರಣಕ್ಕೊಳಪಟ್ಟಿಲ್ಲ.
ಅದಕ್ಕಾಗಿ ಭಗವಂತನನ್ನು “ತ್ರಿಗುಣಾತೀತ ವಿದಾರಕ-ಪರಿತೋ ತೇಹಿಸುಭಕ್ತಿಂ-
ಕರುಣಾಪೂರ್ಣ ಪರಪ್ರದ-ಚರಿತಂ ಜ್ಞಾಪಯಮೇತೇ” ಎಂದು ಸ್ತುತಿಸುತ್ತಾರೆ.
ಇಡೀ ಜಗತ್ತು ತ್ರಿಗುಣದ ನಿಯಂತ್ರಣಕ್ಕೊಳಪಟ್ಟಿದೆ ಆದರೆ ಭಗವಂತ ತ್ರಿಗುಣಾತೀತ.

[…] ಹಿಂದಿನ ಶ್ಲೋಕ : ಭಗವದ್ಗೀತೆ ಅಧ್ಯಾಯ7- ಶ್ಲೋಕ – 12 […]