ಶ್ಲೋಕ – 17
ತೇಷಾಂ ಜ್ಞಾನೀ ನಿತ್ಯಯುಕ್ತ ಏಕಭಕ್ತಿರ್ವಿಶಿಷ್ಯತೇ ।
ಪ್ರಿಯೋ ಹಿ ಜ್ಞಾನಿನೋSತ್ಯರ್ಥಮಹಂ ಸ ಚ ಮಮ ಪ್ರಿಯಃ ॥೧೭॥
ಉಚ್ಚಾರಣೆ:
ತೇಷಾಮ್ ಜ್ಞಾನೀ ನಿತ್ಯಯುಕ್ತಃ ಏಕಭಕ್ತಿಃ ವಿಶಿಷ್ಯತೇ ।
ಪ್ರಿಯಃ ಹಿ ಜ್ಞಾನಿನಃ ಅತ್ಯರ್ಥಮ್ ಅಹಮ್ ಸಃ ಚ ಮಮ ಪ್ರಿಯಃ
ಅವರಲ್ಲಿ ತಿಳಿದವನು ಮಿಗಿಲಾದವನು ; ನನ್ನಲ್ಲೇ ಭಕ್ತಿಯನ್ನಿಟ್ಟು, ನನ್ನನೇ ಸದಾ ನೆನೆಯುವವನು.
ತಿಳಿದವನಿಗೆ ನಾನೆಂದರೆ ತುಂಬಾ ಇಷ್ಟ, ಅವನೆಂದರೆ ನನಗೂ ತುಂಬಾ ಇಷ್ಟ.
ಮೇಲೆ ಹೇಳಿದ ನಾಲ್ಕು ರೀತಿಯ ಭಕ್ತರಲ್ಲಿ ಜ್ಞಾನಿ ಎಲ್ಲರಿಗಿಂತ ಶ್ರೇಷ್ಠ. ಆತ ಜ್ಞಾನಪೂರ್ವಕವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಭಗವಂತನನ್ನು ತಿಳಿದು ಸಹಜವಾಗಿ ಪ್ರೀತಿಸುತ್ತಾನೆ. ಹಿಂದಿನ ಅಧ್ಯಾಯಗಳಲ್ಲಿ ನೋಡಿದಂತೆ ನಾವು ಏನನ್ನು ಮಾಡುತ್ತೇವೋ ಅದನ್ನೇ ಪಡೆಯುತ್ತೇವೆ. ಭಗವಂತನನ್ನು ಹೇಗೆ ಕಾಣುತ್ತೇವೋ ಹಾಗೇ ಭಗವಂತ ನಮ್ಮನ್ನು ಕಾಣುತ್ತಾನೆ. ಈ ಕಾರಣದಿಂದ ಜ್ಞಾನಪೂರ್ವಕವಾದ, ಫಲಾಪೇಕ್ಷೆ ಇಲ್ಲದ, ಏಕಭಕ್ತಿಯುಳ್ಳ ಜ್ಞಾನಿ ಭಗವಂತನಿಗೆ ಬಹಳ ಹತ್ತಿರದಲ್ಲಿರುತ್ತಾನೆ.
