ಶ್ಲೋಕ – 21
ಯೋಯೋ ಯಾಂಯಾಂ ತನುಂ ಭಕ್ತಃ ಶ್ರದ್ಧಯಾSರ್ಚಿತುಮಿಚ್ಛತಿ ।
ತಸ್ಯ ತಸ್ಯಾಚಲಾಂ ಶ್ರದ್ಧಾಂ ತಾಮೇವ ವಿದಧಾಮ್ಯಹಮ್ ॥೨೧॥
ಯಃ ಯಃ ಯಾಮ್ ಯಾಮ್ ತನುಮ್ ಭಕ್ತಃ ಶ್ರದ್ಧಯಾ ಅರ್ಚಿತುಮ್ ಇಚ್ಛತಿ ।
ತಸ್ಯ ತಸ್ಯ ಅಚಲಾಮ್ ಶ್ರದ್ಧಾಮ್ ತಾಮ್ ಏವ ವಿದಧಾಮಿ ಅಹಮ್-
ಯಾರು ಯಾವ ದೇವತಾರೂಪವನ್ನು ಭಕ್ತಿಯಿಟ್ಟು ಶ್ರದ್ಧೆಯಿಂದ ಪೂಜಿಸಬಯಸುತ್ತಾನೆ ಅವರಿಗೆ ಅಂಥದೇ ಶ್ರದ್ಧೆಯನ್ನು ನಾನು ಗಟ್ಟಿಗೊಳಿಸುತ್ತೇನೆ.
ಭಗವಂತನೆಂಬ ಅಸಾಧಾರಣ ಶಕ್ತಿ ತನ್ನ ದೇವತಾ ಪರಿವಾರದೊಂದಿಗೆ ಈ ಜಗತ್ತನ್ನು ನಿಯಂತ್ರಿಸುತ್ತಿದೆ ಎನ್ನವ ಎಚ್ಚರ ಇಲ್ಲದೆ,
ಭಗವಂತನ ಮೇಲಿನ ಏಕಭಕ್ತಿ ಬಿಟ್ಟು, ಕೇವಲ ಒಂದು ದೇವತೆಯನ್ನು ಶ್ರದ್ಧೆಯಿಂದ ಪೂಜೆ ಮಾಡಲು ಆಯ್ಕೆ ಮಾಡಿಕೊಂಡವರಿಗೆ
–“ಯಾವ ದೇವತೆಯ ಮೇಲೆ ಭಕ್ತಿ ಇದೆಯೋ ಅದನ್ನೇ ಆಚಲವಾಗಿಸುತ್ತೇನೆ” ಎನ್ನುತ್ತಾನೆ ಕೃಷ್ಣ!
ಮನುಷ್ಯ ಶ್ರದ್ಧೆಯ ಸ್ವರೂಪ. ಯಾವುದರ ಬಗೆಗೆ ಶ್ರದ್ಧೆ ಮೂಡಿತೋ ಅದೇ ಅವನಲ್ಲಿ ಬೆಳೆದುಕೊಂಡು ಹೋಗುತ್ತದೆ. ಯಾವ ದೇವತಾ ಶಕ್ತಿಯನ್ನು ಶ್ರದ್ಧೆಯಿಂದ ಆರಾಧನೆ ಮಾಡಿದೆವೋ ಅದೇ ನಂಬಿಕೆ ನಮ್ಮಲ್ಲಿ ಗಟ್ಟಿಯಾಗುತ್ತಾ ಹೋಗುತ್ತದೆ ಮತ್ತು ಆ ಶ್ರದ್ಧೆ ನಿಶ್ಚಲವಾಗುತ್ತದೆ. ಅದನ್ನು ಬದಲಿಸುವುದು ಬಹಳ ಕಷ್ಟ. ಈ ಕಾರಣಕ್ಕಾಗಿ ನಾವು ದೇವರ ಬಗ್ಗೆ ತಿಳಿದುಕೊಳ್ಳಬೇಕು.
ದೇವರು ಮತ್ತು ದೇವತಾ ಪರಿವಾರ ಎಂದರೆ ಮಾನವರಂತೆ ಒಬ್ಬರನೊಬ್ಬರು ದ್ವೇಷಿಸುವ ಆಸೂಹೆ ಪಡುವ ಸಂಸ್ಕ್ರತಿ ಉಳ್ಳ ಒಂದು ಗುಂಪು ಎಂದು ನಾವು ತಿಳಿದಿದ್ದರೆ ಅದು ನಮ್ಮ ಮೌಡ್ಯತೆಯ ಪರಮಾವದಿ. ಹಿಂದೆ ಹೇಳಿದಂತೆ ಭಗವಂತ ಅನ್ನುವುದು ಏಕಶಕ್ತಿ. ಆತ ಸದಾ ತನ್ನ ದೇವತಾ ಪರಿವಾರದೊಂದಿಗೆ ಅಭಿವ್ಯಕ್ತವಾಗುತ್ತಾನೆ. ನಾವು ಗಣಪತಿ ಅಥವಾ ಇನ್ನ್ಯಾವುದೇ ದೇವತೆಯ ಆರಾಧನೆ ಮಾಡುವಾಗ ನಮಗೆ ಆ ಏಕ ಶಕ್ತಿಯ ಎಚ್ಚರ ಇದ್ದು ಮಾಡಿದರೆ ಆ ಪೂಜೆ ಮಹಾ ಪೂಜೆಯಾಗುತ್ತದೆ. ಅದನ್ನು ಬಿಟ್ಟು ಗಣಪತಿಯೇ(ಅಥವಾ ಇನ್ಯಾವುದೇ ದೇವತೆ) ಬೇರೆ, ಅವನೊಬ್ಬನೇ ದೇವರು ಎಂದು ತಿಳಿದು ಅದರಲ್ಲೇ ಶ್ರದ್ಧೆ ಬೆಳೆಸಿಕೊಂಡರೆ ಆಗ ಆ ಶ್ರದ್ಧೆಯ ಬೇಲಿಯಲ್ಲಿ ನಾವು ಸಿಕ್ಕಿ ಹಾಕಿಕೊಳ್ಳುತ್ತೇವೆ. ಇದು ಕಲ್ಲಿನ ಮೂರ್ತಿಯನ್ನು ದೇವರೆಂದು ಪೂಜಿಸಿದಂತಾಗುತ್ತದೆ. ನಿಜವಾಗಿ ನಾವು ಪೂಜಿಸುವುದು ಕಲ್ಲಿನ ಮೂರ್ತಿಯನ್ನಲ್ಲ –ಅದರಲ್ಲಿನ ಭಗವಂತನ ಪ್ರತೀಕವನ್ನು.
ಕಲ್ಲಿನ ಮೂರ್ತಿ ಕೇವಲ ದೇವತಾ ಪ್ರತೀಕ. ಸರ್ವಶಕ್ತ ಭಗವಂತ ಆ ಮೂರ್ತಿಯೊಳಗೆ ಅಂತರ್ಗತನಾಗಿದ್ದಾನೆ. ಆದ್ದರಿಂದ ಯಾವುದೇ ದೇವತಾ ಪ್ರತೀಕವನ್ನು ಪೂಜಿಸುವಾಗಲೂ ಕೂಡಾ ‘ಭಗವಂತ ಒಬ್ಬನೆ, ಆತ ಈ ದೇವತೆಯ ಪ್ರತೀಕದಲ್ಲಿ ಅಂತರ್ಗತನಾಗಿ, ತನ್ನ ಸಮಸ್ತ ದೇವತಾ ಪರಿವಾರದ ಮೂಲಕ ನಮ್ಮನ್ನು ರಕ್ಷಿಸುತ್ತಿದ್ದಾನೆ’ ಎನ್ನುವ ಅನುಸಂಧಾನ ಬಹಳ ಮುಖ್ಯ. ಈ ಅನುಸಂಧಾನದಿಂದ ಗಣಪತಿಯನ್ನಾಗಲಿ, ವೀರಭದ್ರನನ್ನಾಗಲಿ, ಕೋಟಿ ಚನ್ನಯ್ಯನನ್ನಾಗಲಿ, ಅಥವಾ ಇನ್ಯಾವುದೇ ದೇವತೆಯನ್ನು ಪೂಜಿಸಿದರೂ ಕೂಡ ಅದು ಪರಮಾತ್ಮ ಮೆಚ್ಚುವ ಮಹಾ ಪೂಜೆಯಾಗುತ್ತದೆ. ನಾವು ಮಾಡುವ ವ್ರತ-ಅನುಷ್ಠಾನ ಕೂಡಾ ಇದೇ ರೀತಿಯಾಗಿರಬೇಕು. ಅದು ಏಕಾದಶಿಯ ಉಪವಾಸವಾಗಿರಲಿ ಅಥವಾ ಸಂಕಷ್ಟಹರ ಚತುರ್ಥಿಯ ಉಪವಾಸವಾಗಿರಲಿ, ಎಲ್ಲವೂ ಕೂಡಾ ಆ ಭಗವದ್ ಪ್ರೀತ್ಯರ್ಥವಾಗಿರಬೇಕು. ಭಗವಂತ ಸರ್ವ ಶಬ್ದವಾಚ್ಯ-ಆದ್ದರಿಂದ ಯಾವ ಹೆಸರಿನಿಂದ ಕರೆದರೂ ಅದು ಭಗವಂತನ ಹೆಸರು; ಭಗವಂತ ಸರ್ವ ಸಮರ್ಥ-ಆದ್ದರಿಂದ ಆತ ಕಲ್ಲಿನಲ್ಲೂ ಇರಬಹುದು ಕಂಬದಲ್ಲೂ ಇರಬಹುದು; ಭಗವಂತ ಸರ್ವಾಂತರ್ಯಾಮಿ-ಸರ್ವ ದೇವತೆಗಳ ಅಂತರ್ಯಾಮಿಯಾಗಿದ್ದು ನಮ್ಮನ್ನು ರಕ್ಷಿಸುವವನು ಆ ಭಗವಂತ. ಈ ಅನುಸಂಧಾನದಿಂದ ಮಾಡುವ ಭಕ್ತಿ ಶ್ರೇಷ್ಠ ಭಕ್ತಿ ಎನಿಸುತ್ತದೆ. ಇದನ್ನು ಬಿಟ್ಟು ಅಂಧಶ್ರದ್ಧೆಯನ್ನು ಬೆಳೆಸಿಕೊಂಡರೆ ಅದೇ ನಮ್ಮಲ್ಲಿ ಗಟ್ಟಿಯಾಗಿ ನಮ್ಮನ್ನು ಅಧಃಪಾತಕ್ಕೆ ತಳ್ಳಬಹುದು!
