ಶ್ಲೋಕ – 24
ಭಗವಂತನನ್ನು ತಿಳಿಯಬೇಕು ಎಂದು ಭಕ್ತಿ ಮತ್ತು ಜ್ಞಾನ ಮಾರ್ಗದಲ್ಲಿ ಸಾಗಿದವರಿಗೂ ಕೂಡ ಭಗವಂತನನ್ನು ತಿಳಿಯುವುದು ಎಷ್ಟು ಕಷ್ಟ ಎನ್ನುವುದನ್ನು ಕೃಷ್ಣ ಈ ಅಧ್ಯಾಯದಲ್ಲಿ ಇನ್ನೂ ವಿವರಿಸುತ್ತಾನೆ.
ಅವ್ಯಕ್ತಂ ವ್ಯಕ್ತಿಮಾಪನ್ನಂ ಮನ್ಯಂತೇ ಮಾಮಬುದ್ಧಯಃ ।
ಪರಂ ಭಾವಮಜಾನಂತೋ ಮಮಾವ್ಯಯಮನುತ್ತಮಮ್ ॥೨೪॥
ಅವ್ಯಕ್ತಮ್ ವ್ಯಕ್ತಿಮ್ ಅಪನ್ನಮ್ ಮನ್ಯಂತೇ ಮಾಮ್ ಅಬುದ್ಧಯಃ ।
ಪರಮ್ ಭಾವಮ್ ಅಜಾನಂತಃ ಮಮ ಅವ್ಯಯಮ್ ಅನುತ್ತಮಮ್-ಅಳಿವಿರದ, ಮಿಗಿಲಿರದ ನನ್ನ ಮಹಿಮೆಯ ಹಿರಿಮೆಯನ್ನರಿಯದ ತಿಳಿಗೇಡಿಗಳು ದೇಹದಿಂದ ಹುಟ್ಟಿಬರದ ನನ್ನನ್ನು ಹುಟ್ಟಿಬಂದೆ ಎಂದು [ಭಗವಂತನೇ ಜೀವಭಾವ ಪಡೆದನೆಂದು ] ತಿಳಿದುಬಿಡುತ್ತಾರೆ.
ಸಾಮಾನ್ಯವಾಗಿ ಭಗವಂತನ ಬಗೆಗೆ ಸರಿಯಾದ ತಿಳುವಳಿಕೆ ಗಳಿಸುವುದು ಕಷ್ಟ. ಆದರೆ ತಪ್ಪು ಗ್ರಹಿಕೆ ಸುಲಭ. ಇಲ್ಲಿ ಕೃಷ್ಣ ಹೇಳುತ್ತಾನೆ “ನಾನು ವಸ್ತುತಃ ಅವ್ಯಕ್ತ” ಎಂದು. ಜೀವ ವ್ಯಕ್ತ ಆಗುವುದು ಅದಕ್ಕೆ ಪಾಂಚಭೌತಿಕ ಶರೀರ ಬಂದಾಗ. ಆದ್ದರಿಂದ ಸ್ಥೂಲವಾದ ಶರೀರವುಳ್ಳದ್ದನ್ನು ವ್ಯಕ್ತ ಎನ್ನುತ್ತಾರೆ. ಭಗವಂತನಿಗೆ ಒಂದು ದಿನ ನಾಶವಾಗುವ ಪಾಂಚಭೌತಿಕ ಶರೀರ ಇಲ್ಲ- ಆತ ಸರ್ವದಾ ಅವ್ಯಕ್ತ. ಇಂತಹ ಅವ್ಯಕ್ತ ಭಗವಂತ ತನ್ನ ಅವತಾರದಲ್ಲಿ ತನ್ನ ಸ್ವತಃ ಇಚ್ಛೆಯಿಂದ ಒಂದು ರೂಪದಲ್ಲಿ ಎಲ್ಲರಿಗೂ ಕಾಣಿಸಿಕೊಳ್ಳುತ್ತಾನೆ. ಶಾಸ್ತ್ರೀಯವಾಗಿ ಭಗವಂತನ ಸ್ವರೂಪದ ಅರಿವಿಲ್ಲದ ಜನ ತಮಗೆ ಕಾಣುವ ಅವತಾರರೂಪಿ ಭಗವಂತನಿಗೆ ತಮ್ಮಂತೆ ಪಾಂಚಭೌತಿಕ ಶರೀರವಿದೆ ಮತ್ತು ಭಗವಂತ ಒಂದು ದಿನ ದೇಹತ್ಯಾಗ ಮಾಡುತ್ತಾನೆ ಎಂದು ತಿಳಿಯುತ್ತಾರೆ. ವ್ಯಕ್ತವಾದ, ಸ್ಥೂಲವಾದ, ನಶ್ವರವಾದ, ಪ್ರಾಕೃತವಾದ ಶರೀರ ಇಲ್ಲದ ಭಗವಂತನನ್ನು ಅಂತಹ ಸ್ಥೂಲವಾದ ಶರೀರದೊಳಗೆ ಬದ್ಧನಾಗಿರುವವನು ಎನ್ನುವ ಅರ್ಥದಲ್ಲಿ ಅವರು ತಿಳಿದುಕೊಳ್ಳುತ್ತಾರೆ. “ಹೀಗೆ ತಿಳಿದುಕೊಳ್ಳುವವರು ಬುದ್ಧಿಶೂನ್ಯರು” ಎನ್ನುತ್ತಾನೆ ಕೃಷ್ಣ.
