ಶ್ಲೋಕ – 29
ಜರಾಮರಣಮೋಕ್ಷಾಯ ಮಾಮಾಶ್ರಿತ್ಯ ಯತಂತಿ ಯೇ ।
ತೇ ಬ್ರಹ್ಮ ತದ್ ವಿದುಃ ಕೃತ್ಸ್ನಮಧ್ಯಾತ್ಮಂ ಕರ್ಮ ಚಾಖಿಲಮ್ ॥೨೯॥
ಜರಾ ಮರಣ ಮೋಕ್ಷಾಯ ಮಾಮ್ ಆಶ್ರಿತ್ಯ ಯತಂತಿ ಯೇ ।
ತೇ ಬ್ರಹ್ಮ ತತ್ ವಿದುಃ ಕೃತ್ಸ್ನಮ್ ಅಧ್ಯಾತ್ಮಮ್ ಕರ್ಮ ಚ ಅಖಿಲಮ್-ಮುಪ್ಪು-ಸಾವುಗಳಿಂದ ಪಾರಾಗಲೆಂದು ನನ್ನನ್ನು ಮೊರೆಹೊಕ್ಕು ಸಾಧನೆಗೆಳಸುವವರು ಆ ‘ಬ್ರಹ್ಮತತ್ವ’ವನ್ನು ತಿಳಿಯಬಲ್ಲರು; ಸಮಗ್ರವಾದ ‘ಅಧ್ಯಾತ್ಮ’ವನ್ನು ಮತ್ತು ಎಲ್ಲ ‘ಕರ್ಮ’ ವನ್ನು ಕೂಡ.
ಭಗವಂತನೆಡೆಗೆ ತಿರುಗಿದವರು ಮುಪ್ಪು-ಸಾವಿನಿಂದ ಪಾರಾಗುವುದಕ್ಕೊಸ್ಕರ, ಈ ಸಂಸಾರ ಬಂಧದಿಂದ ಬಿಡುಗಡೆ ಬಯಸಿ ಭಗವಂತನ ಮೊರೆ ಹೋಗುತ್ತಾರೆ ಮತ್ತು ಸಾಧನೆ ಮಾಡುತ್ತಾರೆ. ಸಾಮಾನ್ಯವಾಗಿ ಏನನ್ನೂ ಬಯಸದೇ ಇರುವುದು ಶ್ರೇಷ್ಠ, ಆದರೆ ಬಯಸುವುದೇ ಜೀವನ ಧರ್ಮವಾಗಿದ್ದಾಗ ಇನ್ನೇನನ್ನೋ ಬಯಸದೆ ಮೋಕ್ಷವನ್ನು ಬಯಸುವುದು ಶ್ರೇಷ್ಠ. ಈ ಶ್ಲೋಕದಲ್ಲಿ ಕೃಷ್ಣ ಮೋಕ್ಷಕ್ಕೆ ಹೋಗುವ ಸಾಧಕನ ಪ್ರಯತ್ನ ಏನು, ಜ್ಞಾನದ ದಾರಿಯಲ್ಲಿ ಹೇಗೆ ಸಾಗಬೇಕು ಅನ್ನುವ ಅದ್ಭುತ ವಿಚಾರವನ್ನು ವಿವರಿಸುತ್ತಾನೆ.
ಅಧ್ಯಾತ್ಮದಲ್ಲಿ ತಿಳಿದುಕೊಳ್ಳಬೇಕಾದ ಸಂಗತಿ ‘ಬ್ರಹ್ಮ’ ಎನ್ನುತ್ತಾನೆ ಕೃಷ್ಣ. ಬ್ರಹ್ಮ ಎನ್ನುವ ಪದ ‘ಅವ ವೃದ್ದೋ’ ಅನ್ನುವ ದಾತುವಿನಿಂದ ಬಂದಿದೆ. ಅವತಿ ಎಂದರೆ ಎಲ್ಲಕ್ಕಿಂತ ದೊಡ್ಡದು ಅದು ಓಂ. ಅಂದರೆ ಅನಾಧಿನಿತ್ಯ, ಸರ್ವ ಗುಣಪೂರ್ಣ, ಸರ್ವಗತ, ಸರ್ವಸಮರ್ಥ ಭಗವಂತ ಬ್ರಹ್ಮ- ಅವನೇ ಓಂ. ಮುಖ್ಯವಾಗಿ ಈ ಶ್ಲೋಕದಲ್ಲಿ “ತೇ ಬ್ರಹ್ಮ ತದ್ ವಿದುಃ” ಅಂದರೆ ‘ಎಲ್ಲಾ ಕಡೆ ಇರುವ ಭಗವಂತನನ್ನು ತಿಳಿಯುತ್ತಾರೆ’ ಎಂದರ್ಥ. ಭಗವಂತನ ಸರ್ವಗತತ್ವದ ಸಾಕ್ಷಾತ್ಕಾರವೇ ಬ್ರಹ್ಮಸಾಕ್ಷಾತ್ಕಾರ. ಬಿಂಬಸಾಕ್ಷಾತ್ಕಾರ ಅಂದರೆ ನಮ್ಮೊಳಗಿರತಕ್ಕಂತಹ ಅಣೋರಣೀಯವಾಗಿರುವ ಭಗವಂತನ ಸಾಕ್ಷಾತ್ಕಾರ. ಇಂತಹ ಬಿಂಬರೂಪಿ ಭಗವಂತನೇ ಇಡೀ ವಿಶ್ವದಲ್ಲಿ ವ್ಯಾಪ್ತನಾಗಿ ತುಂಬಿದ್ದಾನೆ ಎನ್ನುವುದು ಬ್ರಹ್ಮಸಾಕ್ಷಾತ್ಕಾರ. ಭಗವಂತನ ವ್ಯಾಪ್ತ ರೂಪವನ್ನು ನಾವು ಕಾಣಲು ಸಾಧ್ಯವಿಲ್ಲ. ಆದರೆ ಆ ವ್ಯಾಪ್ತಿಯ ಅರಿವು ಬಹಳ ಮುಖ್ಯ. ಸೌರಶಕ್ತಿಯಲ್ಲಿ ತುಂಬಿ ಇಡೀ ಪ್ರಪಂಚವನ್ನು ಬೆಳಗಿಸುವವನೂ ಅವನೆ, ನನ್ನೊಳಗಿದ್ದು ಬೆಳಗಿಸುವವನೂ ಅವನೆ ಎನ್ನುವ ಅರಿವು ಆತ್ಮ ಸಾಕ್ಷಾತ್ಕಾರ. ಬಲಿಚಕ್ರವರ್ತಿಗೆ ಆದ ಅನುಭವ ಕೂಡಾ ಇದೇ. ನಿಮಗೆ ತಿಳಿದಿರುವಂತೆ ವಾಮನ ರೂಪಿ ಭಗವಂತ, ಮಹಾ ದಾನಿ ಬಲಿಚಕ್ರವರ್ತಿಯಲ್ಲಿ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳುತ್ತಾನೆ. ಶುಕ್ರಾಚಾರ್ಯರ ವಿರೋಧವನ್ನು ಲೆಕ್ಕಿಸದೆ ಬಲಿ ವಾಮನನಿಗೆ ದಾನ ಮಾಡಲು ಮುಂದಾಗುತ್ತಾನೆ. ಆಗ ವಾಮನನು ತನ್ನ ಮೊದಲ ಹೆಜ್ಜೆಯಿಂದ ಭೂಮಿಯನ್ನೂ ಮತ್ತು ಎರಡನೇ ಹೆಜ್ಜೆಯಿಂದ ಆಕಾಶವನ್ನು ಆವರಿಸಿದಾಗ , ಮೂರನೇ ಹೆಜ್ಜೆಗೆ ಬಲಿ ತನ್ನ ತಲೆಯನ್ನು ಅರ್ಪಿಸಿ ಪಾತಳವನ್ನು ಸೇರಿ ಉದ್ದಾರವಾಗುತ್ತಾನೆ. ಈ ಕಥೆಯನ್ನು ನಾವು ಸ್ವಲ್ಪ ಆಳವಾಗಿ ವಿಶ್ಲೇಷಿಸಿದರೆ ಕಥೆಯಲ್ಲಿ ಅಡಗಿರುವ ಸಾರ ತಿಳಿಯುತ್ತದೆ. ಸಂಸಾರ ಸಾಗರದಲ್ಲಿ ಮುಳುಗಿರುವ ನಾವೆಲ್ಲರೂ ಒಂದು ರೀತಿಯಲ್ಲಿ ಬಲಿಗಳು. ಭಗವಂತನ ಸಾಕ್ಷಾತ್ಕಾರವಾಗಲು ನಾವೆಲ್ಲರೂ ಮಾನಸಿಕವಾಗಿ, ಆದ್ಯಾತ್ಮಿಕವಾಗಿ ಬಲಿಷ್ಟರಾಗಬೇಕು. ಉಪಾಸನೆಯಲ್ಲಿ ಪ್ರಮುಖವಾಗಿ ಮೂರೂ ಹೆಜ್ಜೆಗಳಿವೆ. ಮೊದಲನೆಯದು ಭಗವಂತನ ಪುಟ್ಟ (ವಾಮನ) ಮೂರ್ತಿಯನ್ನು ದೇವರು ಎಂದು ಆರಾದಿಸುವುದು. ಎರಡನೆಯದು ಉಪಾಸನೆ ಮಾಡುತ್ತಾ ಮಾಡುತ್ತಾ , ಭಗವಂತ ಕೇವಲ ಮೂರ್ತಿಯಲ್ಲಿ ಅಲ್ಲದೆ, ಇಡೀ ಲೋಕದಲ್ಲಿ ವ್ಯಾಪಿಸಿರುವ ಶಕ್ತಿ ಎಂದು ತಿಳಿಯುವುದು. ಪ್ರಮುಖವಾದ ಮೂರನೇ ಹೆಜ್ಜೆ- ಭಗವಂತ ಸರ್ವಾಂತರ್ಯಾಮಿ, ಆತ ನನ್ನೊಳಗೂ ತುಂಬಿದ್ದಾನೆ ಎಂದು ತಿಳಿದು, ಆ ಪರಶಕ್ತಿಗೆ ತಲೆಬಾಗುವುದು. ಆಗ ನಮಗೆ ನಿಜವಾದ ಭಗವಂತನ ಸಾಕ್ಷಾತ್ಕಾರವಾಗುತ್ತದೆ, ಹಾಗು ಭಗವಂತ ನಮ್ಮನ್ನು ಉದ್ದರಿಸುತ್ತಾನೆ. ಬಲಿ ಭಗವಂತ ನನ್ನೊಳಗೆ ಅಂತರ್ಯಾಮಿ(ಆತ್ಮನಿ ವೇದನಂ) ಎಂದು ತಿಳಿದು ಭಗವಂತನಿಗೆ ತನ್ನನ್ನು ಅರ್ಪಿಸಿಕೊಂಡ(ಆತ್ಮ ನಿವೇದನಂ)ಅಥವಾ ತನ್ನ ತಲೆಯನ್ನು ಕೊಟ್ಟ. ಇದು ಮೂರು ಹೆಜ್ಜೆಯ ಪರಿಕಲ್ಪನೆ.
ಭಗವಂತ ಸರ್ವಗತ-ಸರ್ವಸಮರ್ಥ, ಅವನು ಎಲ್ಲವುದರ ಒಳಗೂ ಇದ್ದು ಎಲ್ಲವನ್ನು ಮಾಡುತ್ತಿದ್ದಾನೆ. ಅವನ ಅಧೀನವಾಗಿರತಕ್ಕ ಪ್ರತಿಬಿಂಬ ಈ ಜೀವ ಎನ್ನುವ ಸತ್ಯ ತಿಳಿದಾಗ ಎಲ್ಲ ಕರ್ಮದ ರಹಸ್ಯ ತಿಳಿಯುತ್ತದೆ. ಆದ್ದರಿಂದ ಅಧ್ಯಾತ್ಮದಲ್ಲಿ ತಿಳಿಯಬೇಕಾದ ಮೊದಲ ಮೂರು ವಿಚಾರ ಎಂದರೆ ಭಗವಂತನ ಪ್ರತಿಬಿಂಬವಾದ ಜೀವ, ಪರಿಪೂರ್ಣ ಮತ್ತು ಸರ್ವಸಮರ್ಥನಾದ ಬ್ರಹ್ಮ, ಆ ಅನಂತ ಸಾಮರ್ಥ್ಯದಿಂದ ನಡೆಯುವ ಕರ್ಮ. ಇದೇ ಬ್ರಹ್ಮ-ಕರ್ಮ-ಅಧಿಆತ್ಮ. ಈ ಮೂರು ವಿಚಾರವಲ್ಲದೆ ಇನ್ನೂ ಮೂರು ವಿಷಯಗಳನ್ನೂ ಕೃಷ್ಣ ಮುಂದಿನ ಶ್ಲೋಕದಲ್ಲಿ ವಿವರಿಸುತ್ತಾನೆ.
