ಶ್ಲೋಕ – 30
ಸಾಧಿಭೂತಾಧಿದೈವಂ ಮಾಂ ಸಾಧಿಯಜ್ಞಂ ಚ ಯೇ ವಿದುಃ ।
ಪ್ರಯಾಣಕಾಲೇSಪಿ ಚ ಮಾಂ ತೇ ವಿದುರ್ಯುಕ್ತಚೇತಸಃ ॥೩೦॥
ಉಚ್ಚಾರಣೆ- ಸ ಅಧಿ ಭೂತ ಅಧಿದೈವಮ್ ಮಾಮ್ ಸ ಅಧಿಯಜ್ಞಮ್ ಚ ಯೇ ವಿದುಃ ।
ಪ್ರಯಾಣ ಕಾಲೇ ಅಪಿ ಚ ಮಾಮ್ ತೇ ವಿದುಃ ಯುಕ್ತ ಚೇತಸಃ –
ಯಾರು ‘ಅಧಿಭೂತ’ –‘ಅಧಿದೈವ’ದ ಜತೆಗೆ ನನ್ನನ್ನು ತಿಳಿಯುತ್ತಾರೆ ;
ತಿಳಿದು ಕೊನೆಯ ಕ್ಷಣದಲ್ಲು ನನ್ನನ್ನು ನೆನೆಯುತ್ತಾರೆ, ನನ್ನಲ್ಲೆ ಬಗೆಯಿಟ್ಟ ಅಂಥವರೆ ನನ್ನನ್ನು ಬಲ್ಲವರು.
ಭಗವಂತನ ಅರಿವು ಮೂಡಬೇಕಾದರೆ ಮೊದಲು ಭೌತವಿಜ್ಞಾನ(ಅಧಿಭೂತ)ದ ಅರಿವಿರಬೇಕು. ಪಂಚ ಭೂತಗಳು, ಈ ದೇಹ, ಬ್ರಹ್ಮಾಂಡ, ಪಿಂಡಾಂಡ, ಇಲ್ಲಿರುವ ದ್ರವ್ಯಗಳ ಅರಿವು ಸಾಧನೆಯ ಮೊದಲ ಹೆಜ್ಜೆ. ಅಧಿಭೂತದ ನಂತರ ಅಧಿದೈವದ ಅರಿವು. ನಮ್ಮ ಪಂಚಭೂತಾತ್ಮಕವಾದ ಶರೀರದಲ್ಲಿ ‘ನೋಡುವುದು, ಕೇಳುವುದು, ಅನುಭವಿಸುವುದು’ ಇತ್ಯಾದಿ ಕ್ರಿಯೆ ನಿಯಮಬದ್ಧವಾಗಿ ಹೇಗೆ ನಡೆಯುತ್ತದೆ? ಜಡದಲ್ಲಿ ಕ್ರಿಯೆ ಇಲ್ಲ, ಬದಲಿಗೆ ಅದರ ಹಿಂದಿರುವ ಅಭಿಮಾನಿ ದೇವತೆಗಳು ಒಂದೊಂದು ಇಂದ್ರಿಯದಲ್ಲಿದ್ದು ಒಂದೊಂದು ಕ್ರಿಯೆಯನ್ನು ನಿಯಂತ್ರಿಸುತ್ತಿದ್ದಾರೆ-ಇದು ಅಧಿದೈವದ ತಿಳುವಳಿಕೆ. ಇಂತಹ ಸಹಸ್ರಾರು ದೇವತೆಗಳನ್ನು ನಿಯಂತ್ರಿಸುವ ಅಧ್ಯಕ್ಷ ಆ ಭಗವಂತ. ಈ ಪ್ರಪಂಚದಲ್ಲಿ ಅಥವಾ ಪಿಂಡಾಂಡದಲ್ಲಿ ನಡೆಯುವ ಪ್ರತಿಯೊಂದು ಕ್ರಿಯೆ ಒಂದು ಯಜ್ಞ. ಆ ಯಜ್ಞವನ್ನು ಅಧ್ಯಕ್ಷನಾಗಿ ನಡೆಸುವವನು ಅಧಿಯಜ್ಞ. ಆತ ಸಮಸ್ತ ದೇವತೆಗಳ ನಿಯಾಮಕನಾದ ಭಗವಂತ.
ಒಟ್ಟಿನಲ್ಲಿ ನಾವು ಆರು ವಿಚಾರವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ೧. ಅಧಿಭೂತ-ಭೌತಿಕ ಪ್ರಪಂಚ.; ೨. ಅಧಿಆತ್ಮ-ಜೀವಾತ್ಮ ; ೩. ಅಧಿದೈವ-ಸಮಸ್ತ ತತ್ವಾಭಿಮಾನಿ ದೇವತೆಗಳು ; ೪. ಅಧಿಯಜ್ಞ-ಸರ್ವ ನಿಯಾಮಕ ಭಗವಂತ; ೫. ಬ್ರಹ್ಮ ಸಾಕ್ಷಾತ್ಕಾರ -ಅಂತರ್ಯಾಮಿಯಾಗಿರುವ ಬಿಂಬ ರೂಪಿ ಭಗವಂತನೇ ಎಲ್ಲಾ ಕಡೆ ತುಂಬಿದ್ದಾನೆ ಎನ್ನುವ ಅರಿವು; ೬. ಎಲ್ಲಾ ಕರ್ಮಗಳೂ ಆ ಭಗವಂತನ ಅಧೀನವಾಗಿ ನಡೆಯುತ್ತವೆ ಎನ್ನುವ ಸತ್ಯ.
ಈ ಆರು ವಿಚಾರಗಳೂ ನಮ್ಮ ಜೀವನದ ಕೊನೆಯ ಕ್ಷಣದಲ್ಲಿ(ದೇಹ ತ್ಯಾಗ ಮಾಡುವಾಗ)ಕೂಡ ನಮ್ಮ ಮನದಲ್ಲಿ ಗಾಢವಾಗಿ ನಿಂತಿರಬೇಕು. ನಾವು ದೇಹ ತ್ಯಾಗ ಮಾಡುವಾಗ ನಮ್ಮ ಮನದಲ್ಲಿ ಯಾವುದು ಗಾಢವಾಗಿ ನಿಂತಿರುತ್ತದೋ ಅದು ನಮ್ಮ ಮುಂದಿನ ಜನ್ಮವನ್ನು ನಿರ್ಧರಿಸುತ್ತದೆ. ಇದಕ್ಕಾಗಿ ಜೀವಮಾನದಲ್ಲಿ ಭಗವಂತನ ಅರಿವು ಬಹಳ ಮುಖ್ಯ. “ಸಾಧನೆಯಲ್ಲಿ ಎಂದೂ ಯಾವುದೇ ಮೋಹಕ್ಕೊಳಗಾಗದೆ, ಅಂತ್ಯಕಾಲದಲ್ಲೂ ಸದಾ ಭಗವಂತನನ್ನು ಚಿಂತಿಸುವವನು ನನ್ನನ್ನು ಸೇರುತ್ತಾನೆ” ಎನ್ನುತ್ತಾನೆ ಕೃಷ್ಣ.
ಹೀಗೆ ಈ ಅಧ್ಯಾಯದಲ್ಲಿ ಜ್ಞಾನದ ವೈಭವವನ್ನು ನಮ್ಮ ಮುಂದೆ ತೆರೆದಿಟ್ಟ ಕೃಷ್ಣ, ಮುಂದಿನ ಅಧ್ಯಾಯದಲ್ಲಿ ಅಧಿಭೂತ, ಅಧಿದೈವ, ಅಧಿಆತ್ಮ, ಅಧಿಯಜ್ಞ, ಬ್ರಹ್ಮ, ಕರ್ಮ ಇದರ ವಿಸ್ತಾರವಾದ ವಿವರಣೆಯನ್ನು ವಿವರಿಸುತ್ತಾನೆ.
ಇತಿ ಸಪ್ತಮೋSಧ್ಯಾಯಃ
ಏಳನೆಯ ಅಧ್ಯಾಯ ಮುಗಿಯಿತು
